ಇಸ್ರೇಲಿ ವರ್ಣಭೇದ ಕುರಿತ ಆಮ್ನೆಸ್ಟಿ ವರದಿಯನ್ನು ಪಕ್ಷಭೇದ ಮರೆತು ಖಂಡಿಸಿದ ಅಮೆರಿಕ ಸಂಸದರು

ವಾಷಿಂಗ್ಟನ್, ಫೆ.5: ಪೆಲೆಸ್ತೀನ್ ವಿರುದ್ಧ ಇಸ್ರೇಲ್ ವರ್ಣಭೇದ ನೀತಿಯ ಅಪರಾಧ ಎಸಗಿದೆ ಎಂದು ಆರೋಪಿಸಿರುವ ಆಮ್ನೆಸ್ಟಿ ಇಂಟರ್ನ್ಯಾಷನಲ್ ನ ವರದಿಯ ಬಗ್ಗೆ ಅಮೆರಿಕದ ಆಡಳಿತ ಮತ್ತು ಪ್ರಮುಖ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಅಮೆರಿಕದ 2 ಪ್ರಮುಖ ಪಕ್ಷಗಳು, ಪ್ರಭಾವೀ ಸಂಸದರು, ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಮತ್ತು ಸೆನೆಟ್ ನ ಪ್ರಮುಖ ಸಮಿತಿಗಳ ಮುಖ್ಯಸ್ಥರು ಆಮ್ನೆಸ್ಟಿಯ ವರದಿಯನ್ನು ಖಂಡಿಸುವ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಯೆಹೂದಿ ವಿರೋಧಿ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಕೆಲವು ಮುಖಂಡರು ಆರೋಪಿಸಿದ್ದಾರೆ. ಈ ಬಲವಾದ ಖಂಡನೆಗಳು ಇಸ್ರೇಲ್ಗೆ ಅಮೆರಿಕದಲ್ಲಿರುವ ಬೆಂಬಲದ ದ್ಯೋತಕವಾಗಿದೆ. ಆದರೆ ಇದರಿಂದ ವರದಿಯ ವಿಶ್ವಾಸಾರ್ಹತೆ ಕಡಿಮೆಯಾಗದು ಎಂದು ವಿಶ್ಲೇಷಿಸಲಾಗಿದೆ.
ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಅವರು ಬಯಸಿದ್ದಾರೆ. ಆದರೆ ಮೊಳಕೆ ಈಗಾಗಲೇ ಬೇರುಬಿಟ್ಟಿದೆ. ಆದ್ದರಿಂದ ಅವರ ಪ್ರಯತ್ನ ಫಲ ನೀಡದು ಎಂದು ವಾಷಿಂಗ್ಟನ್ ಮೂಲದ ಚಿಂತಕರ ವೇದಿಕೆ ‘ಅರಬ್ ಅಮೆರಿಕನ್ ಇನ್ಸ್ಟಿಟ್ಯೂಟ್’ ನ ಅಧ್ಯಕ್ಷ ಜೇಮ್ಸ್ ಝಾಗ್ಬಿ ಹೇಳಿದ್ದಾರೆ. ಸ್ಥಳೀಯ ರಾಜಕೀಯ ಒತ್ತಡವು ಆಮ್ನೆಸ್ಟಿ ವರದಿಯನ್ನು ಖಂಡಿಸಲು ಹಲವು ಸಂಸದರನ್ನು ಬಲವಂತಗೊಳಿಸಿದೆ. ಆದರೆ ಆಮ್ನೆಸ್ಟಿಯ ಸ್ಥಾನಮಾನ ಮತ್ತು ಅಂತರಾಷ್ಟ್ರೀಯ ವಿಶ್ವಾಸಾರ್ಹತೆಯ ಇಸ್ರೇಲ್ ಪೆಲೆಸ್ತೀನಿಯರನ್ನು ವ್ಯವಸ್ಥಿತವಾಗಿ ದಬ್ಬಾಳಿಕೆ ಮಾಡುತ್ತಿದೆ ಎಂಬ ವರದಿಯನ್ನು ತಳ್ಳಿಹಾಕಲು ಕಷ್ಟವಾಗಿಸಿದೆ ಎಂದವರು ಹೇಳಿದ್ದಾರೆ.
ಅಮೆರಿಕದ ಸಂಸದರು ಆಮ್ನೆಸ್ಟಿಯ ವರದಿಯಲ್ಲಿ ಉಲ್ಲೇಖಿಸಿರುವ ನಿರ್ಧಿಷ್ಟ ಆರೋಪದ ಬಗ್ಗೆ ಚರ್ಚೆ ಮಾಡುವ ಬದಲು ವರದಿಯನ್ನು ದೂಷಿಸಲು ಮುಂದಾಗಿದ್ದಾರೆ. ವರ್ಣಭೇದ ನೀತಿ ಎಂಬ ಪದ ಬಳಕೆಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವ ಮೂಲಕ, ಇಸ್ರೇಲ್ ಕುರಿತು ವರ್ಣಭೇದ ನೀತಿ ಎಂಬ ಪದ ಬಳಸಲು ನಿಮಗೆಷ್ಟು ಧೈರ್ಯ ಎಂದು ಪ್ರಶ್ನಿಸುವ ಧೋರಣೆ ಇದಾಗಿದೆ ಎಂದು ಜೇಮ್ಸ್ ಝಾಗ್ಬಿ ಹೇಳಿದ್ದಾರೆ.







