ಯತ್ನಾಳ್ ಹೇಳಿಕೆ ಬಗ್ಗೆ ಸಿಎಂ ಉತ್ತರಿಸಲಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ.5: ಹಿಜಾಬ್ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಅವರಿಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರಾಜ್ಯದ ಆಡಳಿತ ನಡೆಸುತ್ತಿದ್ದಾರೆ. ಅವರ ಪಕ್ಷದವರು ಏನು ಹೇಳಿದ್ದಾರೆ? ದೇಶದ ಸಂವಿಧಾನದಂತೆ ಅವರು ಆಡಳಿತ ನಡೆಸುತ್ತಿದ್ದಾರಾ? ಅಥವಾ ಅವರ ಪಕ್ಷದವರು ಹೇಳಿದಂತೆ ಆಡಳಿತ ಮಾಡುತ್ತಿದ್ದಾರಾ ಎಂದು ಅವರೇ ಹೇಳಬೇಕು ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಅವರಿಗೆ ಉತ್ತರ ನೀಡಬೇಕು. ರಸ್ತೆಯಲ್ಲಿ ಹೋಗುವವರು ಮಾತನಾಡಿದ್ದಕ್ಕೆಲ್ಲಾ ನಾನು ಉತ್ತರ ನೀಡಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಹೇಳಿದರು.
ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗದವರ ಸಭೆ ನಡೆಸಲಾಯ್ತು. ಅವರ ಕ್ಷೇತ್ರಗಳಲ್ಲಿ ಹೇಗೆ ಶಕ್ತಿ ನೀಡಬೇಕು ಎಂಬ ಬಗ್ಗೆ ಚರ್ಚೆ ಮಾಡಲು ಎಐಸಿಸಿಯಿಂದ ಒಂದು ತಂಡ ಆಗಮಿಸಿದ್ದು, ಈ ಸಭೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರುವುದಾಗಿ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಪಕ್ಷದ ಸಂಘಟನೆ ವಿಚಾರದಲ್ಲಿ ಮಗ್ನನಾಗಿದ್ದು, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.







