ರಾಹುಲ್ ಗಾಂಧಿಯವರ ‘ಎರಡು ಭಾರತ’ ಹೇಳಿಕೆಗೆ ಜ್ಯೋತಿರಾದಿತ್ಯ ಸಿಂಧಿಯಾ ತಿರುಗೇಟು

ರಾಯ್‌ಪುರ: ‘ಎರಡು ಭಾರತ’ ಎಂಬ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ‘ಅಭಿವೃದ್ಧಿ ಕೊರತೆ, ಭ್ರಷ್ಟಾಚಾರ ಹಾಗೂ ಆರ್ಥಿಕ ದುರುಪಯೋಗ’ದಿಂದ ಗುರುತಿಸಲ್ಪಟ್ಟಿರುವ 2014ರ ಹಿಂದಿನ ಪರಿಸ್ಥಿತಿಯನ್ನು ಕಾಂಗ್ರೆಸ್ ನಾಯಕರು ಉಲ್ಲೇಖಿಸುತ್ತಿರಬಹುದು ಎಂದು ತಿರುಗೇಟು ನೀಡಿದರು.
ಛತ್ತೀಸ್‌ಗಢದ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ವಿಮಾನಯಾನ ಸೌಲಭ್ಯಗಳನ್ನು ವಿಸ್ತರಿಸುವ ಪ್ರಯತ್ನಗಳಲ್ಲಿ ವಿಮಾನಯಾನ ಸಚಿವಾಲಯದೊಂದಿಗೆ ಸಹಕರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಒಂದು ದಿನದ ಭೇಟಿಗಾಗಿ ರಾಯ್‌ಪುರಕ್ಕೆ ಆಗಮಿಸಿದ ನಂತರ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧಿಯಾ, ಭ್ರಷ್ಟಾಚಾರವನ್ನು ತಡೆಗಟ್ಟುವ, ಬೆಳವಣಿಗೆ ಹಾಗೂ ಅಭಿವೃದ್ಧಿಯ ಬಾಗಿಲು ತೆರೆಯುವುದರೊಂದಿಗೆ ಪ್ರಧಾನಿ ನೇತೃತ್ವದಲ್ಲಿ ನವ ಭಾರತವನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.
ರಾಹುಲ್ ಗಾಂಧಿಯವರ "ಎರಡು ಭಾರತ" ಹೇಳಿಕೆಯ ಬಗ್ಗೆ ಕೇಳಿದಾಗ ಸಿಂಧಿಯಾ, "ಭಾರತದ ಯಾವುದೇ ನಾಗರಿಕರು ಇಂತಹ ಹೇಳಿಕೆಯನ್ನು ನೀಡಬಹುದೇ ಎಂದು ನನಗೆ ಆಶ್ಚರ್ಯವಾಗಿದೆ. ನನ್ನ ಭಾರತವು ಒಂದೇ ಹಾಗೂ ಒಗ್ಗಟ್ಟಾಗಿದೆ. ನನ್ನ ದೇಶವು ಒಂದು ಕುಟುಂಬವಾಗಿದೆ. ನನ್ನ ದೇಶದಲ್ಲಿ ಸಹೋದರತ್ವ ಸಂಸ್ಕೃತಿ ಯಾವಾಗಲೂ ಇದೆ’’ ಎಂದರು.
"ಬಹುಶಃ ರಾಹುಲ್ ಗಾಂಧಿ ಅವರು 2014 ರ ಮೊದಲ ಪರಿಸ್ಥಿತಿಯನ್ನು ಉಲ್ಲೇಖಿಸುತ್ತಿದ್ದರು. ಆಗ ಯಾವುದೇ ಪ್ರಗತಿ ಮತ್ತು ಅಭಿವೃದ್ಧಿಯಿಲ್ಲರಲಿಲ್ಲ. ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗ ಮಾತ್ರ ಅಸ್ತಿತ್ವದಲ್ಲಿತ್ತು. ಆದರೆ (ಪಿಎಂ) ಮೋದಿ ಜಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರವನ್ನು ನಿಗ್ರಹಿಸಿದರು ಮತ್ತು ಪ್ರಗತಿಯ ಬಾಗಿಲುಗಳು ತೆರೆದವು. ಈ ಮೂಲಕ ಮತ್ತೊಂದು ದೇಶವು ಹೊರಹೊಮ್ಮಿದೆ. ಈಗ ಭಾರತವು ವಿಶ್ವ ವೇದಿಕೆಯಲ್ಲಿ ಹೊರಹೊಮ್ಮುತ್ತಿದೆ”ಎಂದು ಅವರು ಹೇಳಿದರು.







