ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ: ಇಂದು ಉತ್ತರಪ್ರದೇಶ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ರದ್ದುಗೊಳಿಸಿದ ಬಿಜೆಪಿ

ಲಕ್ನೋ,ಫೆ.6: ರವಿವಾರ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಗೌರವಾರ್ಥ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಇಂದು ನಡೆಯಬೇಕಿದ್ದ ತನ್ನ ಪ್ರಣಾಳಿಕೆ ಬಿಡುಗಡೆಯನ್ನು ಬಿಜೆಪಿ ರದ್ದುಗೊಳಿಸಿದೆ. ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಆದಿತ್ಯನಾಥ, ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಪ್ರಣಾಳಿಕೆ ಬಿಡುಗಡೆಗಾಗಿ ಇಲ್ಲಿ ಸೇರಿದ್ದರು. ಆದರೆ ಮಂಗೇಶ್ಕರ್ ನಿಧನ ವಾರ್ತೆ ಬರುತ್ತಿದ್ದಂತೆ ಪ್ರಣಾಳಿಕೆ ಬಿಡುಗಡೆಯನ್ನು ರದ್ದುಗೊಳಿಸಿದ ನಾಯಕರು ಅಗಲಿದ ಗಾಯಕಿಗಾಗಿ ಎರಡು ನಿಮಿಷಗಳ ವೌನವನ್ನು ಆಚರಿಸಿದರು.
ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ಲೋಕಕಲ್ಯಾಣ ಸಂಕಲ್ಪ ಪತ್ರ (ಚುನಾವಣಾ ಪ್ರಣಾಳಿಕೆ)ದ ಬಿಡುಗಡೆಯನ್ನು ಮುಂದೂಡಲಾಗಿದೆ. ಪ್ರಣಾಳಿಕೆ ಬಿಡುಗಡೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಸಿಂಗ್ ತಿಳಿಸಿದರು. ಉ.ಪ್ರದೇಶದಲ್ಲಿ ಮೊದಲ ಹಂತದ ಮತದಾನ ಫೆ.10ರಂದು ನಡೆಯಲಿದೆ.
ಗೋವಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ರ್ಯಾಲಿ ಸೇರಿದಂತೆ ರವಿವಾರ ನಡೆಯಲಿದ್ದ ಇತರ ರಾಜಕೀಯ ಕಾರ್ಯಕ್ರಮಗಳನ್ನೂ ಬಿಜೆಪಿಯು ಸ್ಥಗಿತಗೊಳಿಸಿದೆ.





