ಹಿಜಾಬ್ ವಿವಾದ; ವಿದ್ಯಾರ್ಥಿನಿಯರು, ಪೋಷಕರಿಗೆ ಬೆಂಬಲ: ಕೆ.ಎಸ್.ಮುಹಮ್ಮದ್ ಮಸೂದ್
ಮಂಗಳೂರು : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೊಕ್ಕ ವಿದ್ಯಾರ್ಥಿನಿ ಯರು ಹಾಗೂ ಪೋಷಕರು ಮತ್ತಿತರರಿಗೆ ಸಂಪೂರ್ಣ ಬೆಂಬಲವಿದೆ ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಬರೆದ ಪತ್ರಕ್ಕೆ ಮುಖ್ಯಮಂತ್ರಿಯ ಅಧೀನ ಕಾರ್ಯದರ್ಶಿಯಿಂದ ಹಿಂಬರಹ ಬಂದಿತ್ತು. ಅದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಿಂದ ಮಾಹಿತಿ ಪಡೆಯಲು ಸೂಚಿಸಿದ್ದರು. ಅದರಂತೆ ಶಿಕ್ಷಣ ಇಲಾಖೆಗೂ ಪತ್ರ ಬರೆಯಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ಉಡುಪಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡರ ವಿರುದ್ಧ ಕಾನೂನು ಕ್ರಮಕ್ಕೂ ಒತ್ತಾಯಿಸಿದ್ದೆ ಎಂದು ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ನಾನು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನಾಗಿದ್ದಾಗ ಉಪ್ಪಿನಂಗಡಿಯ ರಾಮಕುಂಜ ವಿದ್ಯಾಸಂಸ್ಥೆಯಲ್ಲೂ ಹಿಜಾಬ್‌ನ ಸಮಸ್ಯೆಯಾಗಿತ್ತು. ಆವಾಗ ನಾನು ಅದನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದೆ ಎಂದು ಮುಹಮ್ಮದ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.