ಚರಣ್ ಜಿತ್ ಸಿಂಗ್ ಚನ್ನಿ ಪಂಜಾಬ್ ನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ: ರಾಹುಲ್ ಗಾಂಧಿ ಘೋಷಣೆ

ಚಂಡಿಗಡ: ಚರಣ್ ಜಿತ್ ಸಿಂಗ್ ಪಂಜಾಬ್ ನ ಸಂಭಾವ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಘೋಷಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರುವ ಕಾರಣ ಕಾಂಗ್ರೆಸ್ ಗೆ ವಿಧಾನಸಭಾ ಚುನಾವಣೆಗಿಂತ ಮೊದಲು ತನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸುವುದು ಅನಿವಾರ್ಯವಾಗಿತ್ತು. ಸಿಎಂ ಸ್ಥಾನಕ್ಕೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಹಾಲಿ ಮುಖ್ಯಮಂತ್ರಿ ಚನ್ನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
"ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನು ನಿರ್ಧರಿಸಿಲ್ಲ. ನಾನು ಇದನ್ನು ಪಂಜಾಬ್‌ನ ಜನರು, ಯುವಕರು, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಕೇಳಿದೆ ... ನನಗೆ ಅಭಿಪ್ರಾಯವಿರಬಹುದು, ಆದರೆ ನನ್ನ ಅಭಿಪ್ರಾಯಕ್ಕಿಂತ ನಿಮ್ಮ ಅಭಿಪ್ರಾಯ ಮುಖ್ಯ ... ನಮಗೆ ಬಡವರನ್ನು ಅರ್ಥಮಾಡಿಕೊಳ್ಳಲು ಒಬ್ಬ ವ್ಯಕ್ತಿ ಬೇಕು ಎಂದು ಪಂಜಾಬಿಗಳು ನಮಗೆ ಹೇಳಿದರು'' ಎಂದು ರಾಹುಲ್ ಹೇಳಿದ್ದಾರೆ.
ಟೆಲಿಪೋಲ್‌ನ ನಂತರ ರಾಹುಲ್ ಗಾಂಧಿಯವರು ಈ ಘೋಷಣೆ ಮಾಡಿದ್ದಾರೆ. ಟೆಲಿಪೋಲ್ ಹಾಗೂ ನಂತರದ ಘೋಷಣೆಯು ಮುಖ್ಯಮಂತ್ರಿ ಚನ್ನಿ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ನವಜೋತ್ ಸಿಧು ನಡುವಿನ ಜಗಳದ ಫಲಿತಾಂಶವಾಗಿದೆ. ಸಿಧು ಅವರು 2017 ರಲ್ಲಿ ರಾಜ್ಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದಾಗಿನಿಂದ ತಮ್ಮ ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟಪಡಿಸಿದ್ದಾರೆ.







