ತೀವ್ರ ಬಡತನದ ನಡುವೆಯೂ ಭಾರತೀಯ ಅಂಡರ್-19 ಕ್ರಿಕೆಟ್ ತಂಡದ ಉಪನಾಯಕನಾದ ಶೈಖ್ ರಶೀದ್ ಯಶೋಗಾಥೆ

photo: instagram/shaikrasheed66
ಗುಂಟೂರು: ಅಂಡರ್- 19 ವಿಶ್ವಕಪ್ ಪಂದ್ಯಾಕೂಟದ ಸೆಮಿ-ಫೈನಲ್ನಲ್ಲಿ 94 ರನ್ ಗಳಿಸಿರುವ ಭಾರತದ ಅಂಡರ್- 19 ತಂಡದ ಉಪನಾಯಕ ಶೇಖ್ ರಶೀದ್ ತೀವ್ರ ಬಡತನದಲ್ಲಿ ಮತ್ತು ಕಠಿಣ ಪರಿಸ್ಥಿತಿಯಲ್ಲಿರುವ ಕುಟುಂಬದಿಂದ ಬಂದವರು. ಇಂದು ಅವರು ಮಾಡಿರುವ ಸಾಧನೆಯಿಂದ ಅವರ ಕುಟುಂಬ ಮಾಡಿದ ತ್ಯಾಗಕ್ಕೆ ಅತ್ಯುತ್ತಮ ಫಲಿತಾಂಶ ಸಿಕ್ಕಂತಾಗಿದೆ.
ಗುಂಟೂರಿನಲ್ಲಿ ಮನೆಯಿದ್ದ ಶೇಖ್ ರಶೀದ್ ದಿನನಿತ್ಯದ ಪ್ರಾಕ್ಟೀಸ್ಗಾಗಿ 50 ಕಿಮೀ ದೂರದ ಮಂಗಳಾಗಿರಿಗೆ ಪ್ರಯಾಣ ಮಾಡಬೇಕಿತ್ತು. ರಶೀದ್ ತಂದೆ ಶೇಖ್ ಬಾಲಿಷ ಅವರು ದಿನಾಲು ತಮ್ಮ ಮಗನ ಪ್ರಾಕ್ಟೀಸ್ಗಾಗಿ ತಮ್ಮ 100 ರಷ್ಟು ಕಿ.ಮೀ ಪ್ರಯಾಣಿಸುತ್ತಿದ್ದರು. ಅಷ್ಟು ಕಷ್ಟದ ಪರಿಸ್ಥಿತಿಯಲ್ಲೂ ಪ್ರಾಕ್ಟೀಸ್ ತಪ್ಪಿಸದೆ ಇರುತ್ತಿದ್ದ ರಶೀದ್ ಹವಾಮಾನ ಬದಲಾವಣೆಯಿಂದಾಗಿ ಮಾತ್ರ ಕೆಲವೊಮ್ಮೆ ಪ್ರಯಾಣಿಸಲಾಗದೆ ತರಬೇತಿಗಳಿಗೆ ಗೈರಾಗುತ್ತಿದ್ದರು.
ಮಗನ ಕ್ರಿಕೆಟ್ ಕನಸಿಗಾಗಿ ರಶೀದ್ ಕುಟುಂಬ ನಗರಕ್ಕೆ ವಲಸೆ ಹೋಗಿತ್ತು. ಆದರೆ, ತೀವ್ರ ಹಣಕಾಸಿನ ಮುಗ್ಗಟ್ಟಿನ ಕಾರಣದಿಂದ ಮಗನ ತರಬೇತಿ ಶುಲ್ಕ ಹಾಗೂ ಮನೆ ಬಾಡಿಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ 2012 ರಲ್ಲೇ ಗುಂಟೂರಿಗೆ ಮರಳಬೇಕಾಯಿತು ಎಂದು ರಶೀದ್ ತಂದೆ ಹೇಳುತ್ತಾರೆ.
ತೀರ ಸಣ್ಣ ಪ್ರಾಯದಲ್ಲೇ ಅತ್ಯುತ್ತಮ ಕೌಶಲ್ಯ ಹೊಂದಿದ್ದ ರಶೀದ್ಗೆ ಪ್ರೋತ್ಸಾಹ ನೀಡುವಂತೆ ಹಾಗೂ ಕ್ರಿಕೆಟ್ ಕನಸಿಗೆ ಉತ್ತೇಜನ ನೀಡುವಂತೆ ನನ್ನ ಗೆಳೆಯ ಒಬ್ಬರು ನನಗೆ ಸಲಹೆ ನೀಡಿದರು. ಆದರೆ, ಕ್ರಿಕೆಟ್ ಅಕಾಡೆಮಿಗಳ ಶುಲ್ಕ ಭರಿಸಲು ನನ್ನ ಆದಾಯದಿಂದ ಸಾಲುತ್ತಿರಲಿಲ್ಲ. ಹಾಗಾಗಿ, ಕೆಲವು ಕಾಲ ನಾನು ಸ್ಥಳೀಯ ಮೈದಾನ ಒಂದರಲ್ಲಿ ಅವನಿಗೆ ಕ್ರಿಕೆಟ್ ಅಭ್ಯಾಸ ಮಾಡಿಸುತ್ತಿದ್ದೆ. ಕೆಲವು ತಿಂಗಳ ಬಳಿಕ ACA ರೆಸಿಡೆಂಶಿಯಲ್ ಅಕಾಡೆಮಿ ಬಗ್ಗೆ ತಿಳಿದು ಬಂತು.
ರಶೀದ್ಗೆ ಕ್ರಿಕೆಟ್ ಹೊರತಾದ ಇನ್ನಾವುದೇ ಆಸಕ್ತಿಯೂ ಇರಲಿಲ್ಲ. ಎಲ್ಲಾ ಮಕ್ಕಳಂತೆ ಐಸ್ಕ್ರೀಂ, ಆಟಿಕೆಗಳು, ಸಿನೆಮಾ ಮೊದಲಾದ ಯಾವೊಂದನ್ನೂ ಆತ ನನ್ನ ಬಳಿ ಕೇಳುತ್ತಿರಲಿಲ್ಲ. ಸದಾ ಕಾಲವೂ ಕ್ರಿಕೆಟ್ ಮಾತ್ರ ಆತನ ಯೋಚನೆಯಲ್ಲಿರುತ್ತಿತ್ತು ಎಂದು ಬಾಲಿಷ ಹೇಳಿದ್ದಾರೆ.
ರಕ್ಷಕನಾಗಿ ಬಂದ ಕೋಚ್
ಆದರೆ ಕ್ರಮೇಣ ಭಾಗ್ಯ ರಶೀದ್ ಪಾಲಿಗೂ ಒಲಿದ್ ಬಂತು. ರಶೀದ್ ಅಕಾಡೆಮಿ ತರಬೇತುದಾರ ಜೆ ಕೃಷ್ಣ ರಾವ್ ರಶೀದ್ನ ತಂತ್ರ ಮತ್ತು ಶಾಂತತೆಯಿಂದ ವಿಸ್ಮಯಗೊಂಡರು.
"ರಶೀದ್ಗೆ ಆಗ 7 ಅಥವಾ 8 ಆಗಿರಬೇಕು. ಆದರೂ ನಮ್ಮ U-16 ಬೌಲರ್ಗಳನ್ನು ಸಾಕಷ್ಟು ಆರಾಮವಾಗಿ ಎದುರಿಸುತ್ತಿದ್ದ. ಅವನು ತುಂಬಾ ಕಂಪೋಸ್ಡ್ ಆಗಿ ಕಾಣುತ್ತಿದ್ದ. ಅವನಲ್ಲಿ ಪ್ರತಿಭೆ ಇದೆ ಮತ್ತು ಅವನನ್ನು ಸೂಕ್ಷ್ಮವಾಗಿ ಪೋಷಿಸಬೇಕು ಎಂದು ನಾನು ಗುರುತಿಸಿದ್ದೆ” ಎಂದು ಕೋಚ್ ಹೇಳುತ್ತಾರೆ.
ರಶೀದ್ ತಂದೆ ಕೆಲಸ ಕಳೆದುಕೊಳ್ಳುವವರೆಗೆ ಎಲ್ಲವೂ ಸರಿಯಿತ್ತು. ಕೆಲಸ ಕಳೆದುಕೊಂಡ ಬಳಿಕ ರಶೀದ್ ತಂದೆ ಮಗನನ್ನು ಸರಿಯಾಗಿ ಅಕಾಡೆಮಿಗೆ ಕಳುಹಿಸಲು ಪ್ರಯಾಸ ಪಡಬೇಕಾಯಿತು. ನಂತರ ಕೋಚ್ ಮುಂದಡ ಬಂದು, ರಶೀದ್ ಅಕಾಡೆಮಿಯಲ್ಲೇ ಉಳಿದುಕೊಳ್ಳಲಿ ಎಂದು ಸಲಹೆ ನೀಡುತ್ತಾರೆ. ಮೊದಲಿಗೆ ರಶೀದ್ ತಂದೆ ಹಿಂಜರಿದರೂ ಮಗನ ಕನಸಿಗಾಗಿ ಹಾಗೂ ಭವಿಷ್ಯಕ್ಕಾಗಿ ಕೋಚ್ ಸಲಹೆ ಸ್ವೀಕರಿಸುತ್ತಾರೆ.
ನಂತರ ನಡೆದೆದ್ದಲ್ಲವೂ ಇತಿಹಾಸ. ಮುಂದಿನ ಎರಡೇ ವರ್ಷದಲ್ಲಿ ಆಂದ್ರದ ಅಂಡರ್-14 ತಂಡಕ್ಕೆ ರಶೀದ್ ಆಯ್ಕೆಯಾಗುತ್ತಾರೆ.
ನಂತರ 2018-19 ರಲ್ಲಿ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ, ಅವರು 168.50 ರ ಸರಾಸರಿಯಲ್ಲಿ 674 ರನ್ಗಳನ್ನು ಗಳಿಸಿದರು, ಕನಸು ಬೆನ್ನಟ್ಟಿದ ಓಟ ಸಾಗಿತು. ವಿನೂ ಮಂಕಡ್ ಟ್ರೋಫಿಯಲ್ಲಿ (2020-21) ಆರು ಪಂದ್ಯಗಳಲ್ಲಿ 376 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು. ಕಳೆದ ವರ್ಷ ಡಿಸೆಂಬರ್ನಲ್ಲಿ U-19 ಏಷ್ಯಾಕಪ್ಗೆ ಆಯ್ಕೆಯಾದ ಅವರು ಸೆಮಿಫೈನಲ್ನಲ್ಲಿ ಬಾಂಗ್ಲಾದೇಶದ ವಿರುದ್ಧ 103 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದರು.
ಅಂಡರ್-19 ವಿಶ್ವಕಪ್ಗೆ ಸನ್ನದ್ಧಗೊಳ್ಳುತ್ತಿದ್ದಂತೆ, ಸೌತ್ ಆಫ್ರಿಕಾದ ವಿರುದ್ಧದ ಮೊದಲ ಪಂದ್ಯಾಟದ ವೇಳೆ ಕೋವಿಡ್ ಪಾಸಿಟಿವ್ ಬಂದ ಕಾರಣ ಆಟದಿಂದ ಆತ ಹೊರಗುಳಿಯಬೇಕಾಯಿತು. ಈ ನೋವಿನಲ್ಲಿ ಕೋಚ್ ಬಳಿ ಅತ್ತಿದ್ದರಂತೆ ರಶೀದ್.
ಆದರೆ, ಬಾಂಗ್ಲಾ ದೇಶದೊಂದಿಗಿನ ಕ್ವಾರ್ಟರ್ ಫೈನಲ್ಗೂ ಮೊದಲೇ ರಶೀದ್ ಚೇತರಿಸಿಕೊಂಡಿದ್ದು ಅದೃಷ್ಟ. ಆಸ್ಟ್ರೇಲಿಯಾ ತಂಡದೊಂದೊಂದಿಗೆ ನಡೆದ ಸೆಮಿ ಫೈನಲಿನಲ್ಲಿ 94 ರನ್ಗಳನ್ನು ಪೇರಿಸಿದ ರಶೀದ್, ನಾಯಕ ಯಶ್ ಧುಲ್ ಜೊತೆಯಾಟದಲ್ಲಿ 204 ರನ್ಗಳನ್ನು ಸೇರಿಸಿದ್ದಾರೆ.







