ಫೆ.26-27: 'ನಮ್ಮ ಅಬ್ಬಕ್ಕ - 2022’ ಅಮೃತ ಸ್ವಾತಂತ್ರ್ಯ ಸಂಭ್ರಮ
ಮಂಗಳೂರು, ಫೆ.6: ತುಳುನಾಡಿನಿಂದ ಸ್ವಾತಂತ್ರ್ಯ ಕಹಳೆಯೂದಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ಉಳ್ಳಾಲ ವೀರರಾಣಿ ಅಬ್ಬಕ್ಕನ ರಾಷ್ಟ್ರಪ್ರೇಮವನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭ ಸ್ಮರಿಸುವ ಸಲುವಾಗಿ 'ನಮ್ಮ ಅಬ್ಬಕ್ಕ- 2022’ ಅಮೃತ ಸ್ವಾತಂತ್ರ್ಯ ಸಂಭ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ಫೆ.26 ಮತ್ತು 27ರಂದು ನಗರದ ಪುರಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದೆ.
ಫೆ.26ರಂದು ಮೇಯರ್ ಪ್ರೇಮನಾಥ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಪಪೂ ಕಾಲೇಜು ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆಗಳ ಗಾಯನ ಹಾಗೂ ಸಾರ್ವಜನಿಕರಿಗಾಗಿ 'ಭಾರತ ಸ್ವಾತಂತ್ರ್ಯದ ಅಮೃತೋತ್ಸವ: ರಾಣಿ ಅಬ್ಬಕ್ಕನ ನೆನಹು’ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ ಇತಿಹಾಸ ತಜ್ಞರಿಂದ ವಿಚಾರ ಸಂಕಿರಣ, ಬಹುಭಾಷಾ ಕವಿಗೋಷ್ಠಿ-ಕಾವ್ಯ ಗಾನ, ಅಬ್ಬಕ್ಕ ಗೀತೆ, ಸ್ವಾತಂತ್ರ್ಯಾಮೃತ ಗೀತ ನೃತ್ಯ, ಹಾಸ್ಯ ರಂಜನೆ, ಯಕ್ಷ ನೃತ್ಯ ವೈಭವ, ಸಂಗೀತ ಸೌರಭ ಇತ್ಯಾದಿ ವಿವಿಧ ಸಾಂಸ್ಕೃತಿಕ ಕಲಾಪಗಳನ್ನೂ ಏರ್ಪಡಿಸಲಾಗಿದೆ.
ಫೆ.27ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ನಾಡಿನ ಇಬ್ಬರು ಸಾಧಕರಿಗೆ 'ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ’ ಮತ್ತು ’ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.







