ಮೊದಲ ಏಕದಿನ: ವೆಸ್ಟ್ಇಂಡೀಸ್ ವಿರುದ್ಧ ಭಾರತ ಶುಭಾರಂಭ
ರೋಹಿತ್ ಶರ್ಮಾ ಅರ್ಧಶತಕ, ಯಜುವೇಂದ್ರ ಚಹಾಲ್ಗೆ 4 ವಿಕೆಟ್

Photo: BCCI
ಅಹಮದಾಬಾದ್, ಫೆ.6: ಆರಂಭಿಕ ಬ್ಯಾಟರ್ ಹಾಗೂ ನಾಯಕ ರೋಹಿತ್ ಶರ್ಮಾ ಗಳಿಸಿದ ಅರ್ಧಶತಕ(60, 51 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಯಜುವೇಂದ್ರ ಚಹಾಲ್ ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ವೆಸ್ಟ್ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯವನ್ನು ಭಾರತವು 6 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರವಿವಾರ ನಡೆದ ತನ್ನ 1,000ನೇ ಏಕದಿನ ಪಂದ್ಯದಲ್ಲಿ ಗೆಲ್ಲಲು 177 ರನ್ ಗುರಿ ಪಡೆದ ಭಾರತವು 28 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
ಇಶಾನ್ ಕಿಶನ್(28, 36 ಎಸೆತ)ಅವರೊಂದಿಗೆ ಮೊದಲ ವಿಕೆಟ್ಗೆ 84 ರನ್ ಜೊತೆಯಾಟ ನಡೆಸಿದ ರೋಹಿತ್ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಭಾರತವು 116 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ಚೊಚ್ಚಲ ಪಂದ್ಯವನ್ನಾಡಿದ ದೀಪಕ್ ಚಹಾರ್ (26, 32 ಎಸೆತ) ಹಾಗೂ ಸೂರ್ಯಕುಮಾರ್ ಯಾದವ್(ಔಟಾಗದೆ 34, 36 ಎಸೆತ)5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 62 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.





