ಪಂಜಿಮೊಗರು ಕ್ರೈಸ್ತ ಪ್ರಾರ್ಥನಾ ಮಂದಿರ ಧ್ವಂಸ: ಕ್ರಮಕ್ಕೆ ಡಿವೈಎಫ್‌ಐ ಆಗ್ರಹ
ಮಂಗಳೂರು, ಫೆ.6: ನಗರ ಹೊರವಲಯದ ಪಂಜಿಮೊಗರು ಪ್ರದೇಶದ ಉರುಂದಾಡಿ ಗುಡ್ಡೆಯ 'ಖುರ್ಸು ಗುಡ್ಡೆ' ಎಂದೇ ಗುರುತಿಸಲ್ಪಟ್ಟಿರುವ ಮತ್ತು ಕಳೆದ 40 ವರ್ಷಗಳಿಂದ ಪ್ರಾರ್ಥನಾ ಕೇಂದ್ರವಾಗಿರುವ ಸೈಂಟ್ ಆ್ಯಂಟನಿ ಹೋಲಿ ಕ್ರಾಸ್‌ನ್ನು ನೆಲಸಮ ಮಾಡಿರುವ ಕೃತ್ಯವನ್ನು ಖಂಡಿಸಿರುವ ಡಿವೈಎಫ್‌ಐ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರಗಿಸಲು ಆಗ್ರಹಿಸಿದೆ.
ಈ ಪ್ರಾರ್ಥನಾ ಕೇಂದ್ರವನ್ನು ದುಷ್ಕರ್ಮಿಗಳು ಏಕಾಏಕಿ ನೆಲಸಮ ಮಾಡಿರುವುದು ಖಂಡನೀಯ. ಕಟ್ಟಡದ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ದ್ವಂಸ ಮಾಡಲಾಗಿದೆ. ಧ್ವಂಸ ಮಾಡಿದವರ ಮತ್ತು ಇದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ದವೂ ಕ್ರಮ ಜರುಗಿಸುವಂತೆ ಡಿವೈಎಫ್‌ಐ ಪಂಜಿಮೊಗರು ಘಟಕ ಆಗ್ರಹಿಸಿದೆ.
ಕಳೆದ ನವೆಂಬರ್‌ನಲ್ಲಿ ಈ ಕಟ್ಟಡದಲ್ಲಿ ಮತಾಂತರ ಎಂಬ ಪುಕಾರು ಎಬ್ಬಿಸಿದ ಸಂಘಪರಿವಾರವು ಪ್ರದೇಶದ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ನಡೆಸಿತ್ತು. ಆ ಸಂದರ್ಭ ಸ್ಥಳೀಯ ಜನಪ್ರತಿನಿಧಿಯು ಸ್ಥಳೀಯರನ್ನು ಜೊತೆಗೂಡಿಸಿ ಮಾತುಕತೆ ನಡೆಸಿಲ್ಲ. ಸೌಹಾರ್ದದಿಂದ ಪರಿಹಾರ ಕಂಡುಕೊಳ್ಳವಲ್ಲೂ ಅವರು ವಿಫಲರಾಗಿ ದ್ದರು. ಅದನ್ನೇ ಬಳಸಿಕೊಂಡ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಮುಂದಿನ ದಿನಗಳಲ್ಲಿ ನ್ಯಾಯಯುತ ಹೋರಾಟದಲ್ಲಿ ಡಿವೈಎಫ್‌ಐ ಪಂಜಿಮೊಗರು ಘಟಕ ಬೆಂಬಲಿಸಲಿದೆ ಎಂದು ಘಟಕದ ಅಧ್ಯಕ್ಷ ಚರಣ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಡಿಸೋಜ ಹೇಳಿಕೆಯಲ್ಲಿ ತಿಳಿಸಿದ್ದಾರೆ.