ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯ ಹಂತ ಹಂತವಾಗಿ ನಾಶವಾಗುತ್ತಿದೆ: ಫಹದ್ ಶಾ ಬಂಧನಕ್ಕೆ ಎಡಿಟರ್ಸ್ ಗಿಲ್ಡ್ ಟೀಕೆ
ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪತ್ರಕರ್ತರಿಗೆ ಕಿರುಕುಳ ನೀಡುವುದು ನಿಲ್ಲಿಸಬೇಕು: ಎಡಿಟರ್ಸ್ ಗಿಲ್ಡ್

Fahad Shah. Photo: Twitter/@pzfahad
ಹೊಸದಿಲ್ಲಿ: ಕಾಶ್ಮೀರಿ ಪತ್ರಕರ್ತ ಫಹದ್ ಶಾ ಅವರ ಬಂಧನವನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (The Editors Guild of India - EGI)) ರವಿವಾರ ಖಂಡಿಸಿದ್ದು, “ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು ಮತ್ತು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದೆ.
ಪುಲ್ವಾಮಾದಲ್ಲಿ ನಡೆದ ಎನ್ಕೌಂಟರ್ ಕುರಿತು ಮಾಡಿದ ವರದಿಯಲ್ಲಿ "ಭಯೋತ್ಪಾದಕ ಚಟುವಟಿಕೆಗಳನ್ನು ವೈಭವೀಕರಿಸಲಾಗಿದೆ" ಎಂದು ಸುದ್ದಿ ಪೋರ್ಟಲ್ ʼಕಾಶ್ಮೀರ್ ವಲ್ಲಾʼದ (Kashmir Walla) ಸಂಪಾದಕ ಪಹದ್ ಶಾ ಅವರನ್ನು ಫೆಬ್ರವರಿ 4 ರಂದು ಬಂಧಿಸಲಾಗಿತ್ತು.
"ಕಳೆದ ಕೆಲವು ವರ್ಷಗಳಿಂದ ಅವರ ಬರವಣಿಗೆಗಾಗಿ ಫಹದ್ ಅವರನ್ನು ಹಲವು ಬಾರಿ ಕರೆಸಲಾಗುತ್ತಿತ್ತು ಮತ್ತು ಇದೀಗ ಬಂಧಿಸಲಾಗಿದೆ" ಎಂದು EGI ಹೇಳಿದೆ. ಫಹದ್ ಅವರ ಬಂಧನವು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ದೊಡ್ಡ ಪ್ರವೃತ್ತಿಯ ಒಂದು ಭಾಗವಾಗಿದೆ, ಏಕೆಂದರೆ ವರದಿಗಳಿಗಾಗಿ ಭದ್ರತಾ ಪಡೆಗಳು ಪತ್ರಕರ್ತರನ್ನು ಪ್ರಶ್ನಿಸುವುದು ಮತ್ತು ಅವರನ್ನು ಬಂಧಿಸುತ್ತಾರೆ ಆಗಾಗ ನಡೆಯುತ್ತಿರುತ್ತದೆ ಎಂದು ಇಜಿಐ ಹೇಳಿದೆ.
ಇನ್ನಿತರ ಎರಡು ಪ್ರತ್ಯೇಕ ಘಟನೆಗಳನ್ನು ಕೂಡಾ ಉಲ್ಲೇಖಿಸಿರುವ ಇಜಿಐ ʼಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಜಾಗವು ಹಂತಹಂತವಾಗಿ ನಾಶವಾಗುತ್ತಿದೆ. ಕಳೆದ ತಿಂಗಳು, ಭದ್ರತಾ ಪಡೆಗಳು ಕಾಶ್ಮೀರ ಪ್ರೆಸ್ ಕ್ಲಬ್ ಆಡಳಿತದ ದಂಗೆಯಲ್ಲಿ ಕೆಲವು ಪತ್ರಕರ್ತರಿಗೆ ಕುಮ್ಮಕ್ಕು ನೀಡಿತು, ಮತ್ತು ನಂತರ ರಾಜ್ಯ ಅಧಿಕಾರಿಗಳು ಕ್ಲಬ್ ಅನ್ನು ಸಂಪೂರ್ಣವಾಗಿ ಮುಚ್ಚಿದರು, ಭೂಮಿಯನ್ನು ಎಸ್ಟೇಟ್ ಇಲಾಖೆಗೆ ಮರಳಿಸಲಾಯಿತುʼ ಎಂದು ಹೇಳಿದೆ.
ಫೆಬ್ರವರಿ 7 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪತ್ರಕರ್ತ ಗೋಹರ್ ಗಿಲಾನಿ ಅವರಿಗೆ ಶೋಪಿಯಾನ್ ಜಿಲ್ಲೆಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಸಮನ್ಸ್ ನೀಡಿರುವುದು ಮತ್ತು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗಾಗಿ ಕಾಶ್ಮೀರ ವಲ್ಲಾದ ಇನ್ನೊಬ್ಬ ಪತ್ರಕರ್ತ ಸಜಾದ್ ಗುಲ್ ಬಂಧನ ನಡೆದಿರುವುದನ್ನು ಇಜಿಐ ಉಲ್ಲೇಖಿಸಿದೆ.
ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸಲು ಮತ್ತು ಪತ್ರಕರ್ತರ ಕಿರುಕುಳವನ್ನು ತಡೆಯಲು ಸರ್ಕಾರವನ್ನು ಆಗ್ರಹಿಸಿರುವ ಇಜಿಐ, ಫಹಾದ್ ಶಾ ಮತ್ತು ಸಜಾದ್ ಗುಲ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ. ಕಠಿಣ ದಂಡ ಕಾನೂನುಗಳ ಅಡಿಯಲ್ಲಿ ಎಫ್ಐಆರ್ಗಳು, ಬೆದರಿಕೆಯೊಡ್ಡುವ ಪ್ರಶ್ನೆಗಳು ಮತ್ತು ತಪ್ಪಾದ ಬಂಧನವನ್ನು "ಪತ್ರಕರ್ತರ ಹಕ್ಕುಗಳನ್ನು ನಿಗ್ರಹಿಸುವ ಸಾಧನಗಳಾಗಿ" ಬಳಸಬಾರದು ಎಂದು ಅದು ಹೇಳಿದೆ.
Editors Guild of India strongly condemns the arrest of Fahad Shah, editor of the Kashmir Walla. Demands his immediate release and urges state authorities to ensure that FIRs, intimidatory questioning, and wrongful detainment are not used as tools for suppressing press freedom pic.twitter.com/4hWCXZUQth
— Editors Guild of India (@IndEditorsGuild) February 6, 2022







