ಎ.1ರಿಂದ ಎರಡು ಭಾಗಗಳಾಗಿ ಭವಿಷ್ಯನಿಧಿ ಖಾತೆಗಳ ವಿಭಜನೆ

ಹೊಸದಿಲ್ಲಿ,ಫೆ.6: ಅಸ್ತಿತ್ವದಲ್ಲಿರುವ ಭವಿಷ್ಯನಿಧಿ (ಪಿಎಫ್) ಖಾತೆಗಳನ್ನು ಎ.1ರಿಂದ ಎರಡು ಭಾಗಗಳನ್ನಾಗಿ ವಿಭಜಿಸುವ ಸಾಧ್ಯತೆಯಿದೆ. ಸರಕಾರವು ಕಳೆದ ವರ್ಷದ ಸೆಪ್ಟಂಬರ್ನಲ್ಲಿ ನೂತನ ಆದಾಯ ತೆರಿಗೆ ನಿಯಮಗಳನ್ನು ಅಧಿಸೂಚಿಸಿದ್ದು,ಭವಿಷ್ಯನಿಧಿ ಖಾತೆಗಳನ್ನು ಎರಡು ಭಾಗಗಳನ್ನಾಗಿ ವಿಭಜಿಸಲಾಗುವುದು. ಈ ಕ್ರಮವು ವಾರ್ಷಿಕ 2.5 ಲ.ರೂ.ಗೂ ಹೆಚ್ಚು ಮೊತ್ತದ ಉದ್ಯೋಗಿಗಳ ವಂತಿಗೆಗಳ ಮೇಲಿನ ಪಿಎಫ್ ಆದಾಯದ ಮೇಲೆ ತೆರಿಗೆ ಹೇರಲು ಸರಕಾರಕ್ಕೆ ಅವಕಾಶವನ್ನು ಕಲ್ಪಿಸುತ್ತದೆ.
ನೂತನ ನಿಯಮಾವಳಿಗಳೊಂದಿಗೆ ಕೇಂದ್ರವು ಹೆಚ್ಚು ಆದಾಯವನ್ನು ಹೊಂದಿರುವ ವ್ಯಕ್ತಿಗಳು ಸರಕಾರದ ಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುವುದನ್ನು ತಡೆಯಲು ಉದ್ದೇಶಿಸಿದೆ. ಸರಕಾರವು ಯೋಜಿಸಿರುವಂತೆ ಹಾಲಿ ಇರುವ ಎಲ್ಲ ಭವಿಷ್ಯನಿಧಿ ಖಾತೆಗಳನ್ನು ತೆರಿಗೆಗೆ ಅರ್ಹ ಮತ್ತು ತೆರಿಗೆಗೆ ಒಳಪಡದ ವಂತಿಗೆ ಖಾತೆಗಳನ್ನಾಗಿ ವಿಭಜಿಸಲಾಗುವುದು.
ತೆರಿಗೆಗೆ ಒಳಪಡದ ಖಾತೆಗಳು 2021,ಮಾ.31ಕ್ಕೆ ಇದ್ದಂತೆ ಖಾತೆಯ ವಿವರಗಳನ್ನು ಒಳಗೊಂಡಿರುತ್ತವೆ.
ಅಧಿಕೃತ ಮೂಲಗಳು ತಿಳಿಸಿರುವಂತೆ ನಿಯಮಗಳು 2022,ಎ.1ರಿಂದ ಜಾರಿಗೆ ಬರಬಹುದು.
ವಾರ್ಷಿಕ 2.5 ಲ.ರೂ.ಗಿಂತ ಹೆಚ್ಚಿನ ಉದ್ಯೋಗಿಗಳ ವಂತಿಗೆಗಳ ಮೇಲಿನ ಭವಿಷ್ಯನಿಧಿ ಆದಾಯದ ಮೇಲೆ ಹೊಸದಾಗಿ ತೆರಿಗೆಯನ್ನು ಹೇರಲು ಆದಾಯ ತೆರಿಗೆ ನಿಯಮಗಳಡಿ ನೂತನ ಸೆಕ್ಷನ್ 9ಡಿ ಅನ್ನು ಸೇರಿಸಲಾಗಿದೆ.
ತೆರಿಗೆಗರ್ಹ ಬಡ್ಡಿಯನ್ನು ಲೆಕ್ಕ ಹಾಕಲು ಹಾಲಿ ಹಣಕಾಸು ವರ್ಷದಲ್ಲಿ ಮತ್ತು ಹಿಂದಿನ ಹಣಕಾಸು ವರ್ಷಗಳಿಗೆ ಪಿಎಫ್ ಖಾತೆಗಳನ್ನು ಎರಡು ಭಾಗಗಳನ್ನಾಗಿ ವಿಭಜಿಸಲಾಗುವುದು .







