ಮುಂದಿನ ದಿನಗಳಲ್ಲಿ ಯುವ ಬರಹಗಾರರ ಸಮ್ಮೇಳನ: ಸಚಿವ ಸುನೀಲ್

ಉಡುಪಿ, ಫೆ.6: ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಯುವಜನತೆ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಯುವ ಬರಹ ಗಾರರ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಅಮೋಘ ಹಿರಿಯಡಕ ಇದರ ವತಿಯಿಂದ ಪೂರ್ಣಿಮಾ ಸುರೇಶ್ ಅವರ ’ಮಧ್ಯಮಾವತಿ’ ಕವನ ಸಂಕಲನವನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಕಲಾ ಮಂದಿರದಲ್ಲಿ ರವಿವಾರ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಕವನ ಎಂಬುದು ಮನಸ್ಸಿನ ಭಾವನೆ, ನೋವು, ನಲಿವು, ವೇದನೆಗಳನ್ನು ಶಬ್ದ ರೂಪದಲ್ಲಿ ಪ್ರಕಟ ಮಾಡುವವರಿಗೆ ಮಾತ್ರ ಕಾವ್ಯ ಬರೆಯಲು ಸಾಧ್ಯ ವಾಗುತ್ತದೆ. ಒಳಮನಸ್ಸುಗಳು ಮಾತನಾಡಬೇಕು. ಇಲ್ಲದಿದ್ದರೆ ಆ ವ್ಯಕ್ತಿ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಒಳಮನಸ್ಸಿನಲ್ಲಿ ಪ್ರಕಟಿತಗೊಳ್ಳುವ ವಿಚಾರವೇ ಕಾವ್ಯ, ಸಾಹಿತ್ಯ ಆಗಿರುತ್ತದೆ ಎಂದರು.
ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪಗೌಡ ವಹಿಸಿದ್ದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಕವಿ ಕಾವ್ಯದ ಕುರಿತು ಮಾತನಾಡಿದರು.
ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜ ಶೇಖರ ಹಳೆಮನೆ ಕೃತಿ ಪರಿಚಯ ಮಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕವಯಿತ್ರಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಅಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪಾರ್ವತಿ ಐತಾಳ್ ಅವರನ್ನು ಸನ್ಮಾನಿಸಲಾಯಿತು. ಅಮೋಘ ನಿರ್ದೇಶಕ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘನಾ ಕಾರ್ಯಕ್ರಮ ನಿರೂಪಿಸಿದರು.