ಕಟ್ಟಡ ಕೆಡವಿದ್ದಲ್ಲದೆ ಸೊತ್ತುಗಳನ್ನೂ ಕಳವು ಮಾಡಿದರು: ಸ್ಥಳೀಯರ ಆರೋಪ
ಪಂಜಿಮೊಗರು ಕ್ರೈಸ್ತ ಪ್ರಾರ್ಥನಾ ಕೇಂದ್ರ ಧ್ವಂಸ ಪ್ರಕರಣ

ಫೈಲ್ ಫೋಟೊ
ಮಂಗಳೂರು, ಫೆ.6: ನಗರ ಹೊರವಲಯದ ಪಂಜಿಮೊಗರು ಸಮೀಪದ ಉರುಂದಾಡಿ ಗುಡ್ಡೆಯ 'ಖುರ್ಸು ಗುಡ್ಡೆ' ಎಂದೇ ಗುರುತಿಸಲ್ಪಟ್ಟಿರುವ ಮತ್ತು ಕಳೆದ 40 ವರ್ಷಗಳಿಂದ ಪ್ರಾರ್ಥನಾ ಕೇಂದ್ರವಾಗಿರುವ ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ನ್ನು ಧ್ವಂಸ ಮಾಡಿದ ಕೃತ್ಯಕ್ಕೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
'ಸುಮಾರು 42 ವರ್ಷದ ಹಿಂದೆ ನಮ್ಮ ಹಿರಿಯರು ಈ ಪ್ರಾರ್ಥನಾ ಕೇಂದ್ರವನ್ನು ತುಂಬಾ ಕಷ್ಟಪಟ್ಟು ಕಟ್ಟಿದ್ದರು. ನೀರೇ ಇಲ್ಲದ ಈ ಗುಡ್ಡೆಯಲ್ಲಿ ಹೆಗಲ ಮೇಲೆ ನೀರು ಹೊತ್ತುಕೊಂಡು ಬಂದು ಕೆಲಸ ಮಾಡಿದ್ದರು. ಆದರೆ ಯಾರೂ ಇಲ್ಲದ ಸಮಯ ದುಷ್ಕರ್ಮಿಗಳು ಇದನ್ನು ಕೆಡವಿದ್ದಾರೆ. ಅಷ್ಟೇ ಅಲ್ಲ, ಇಲ್ಲಿದ್ದ ಕುರ್ಚಿ, ಬೆಂಚು, ವಿದ್ಯುತ್ ದೀಪ, ಫ್ಯಾನ್ ಹಾಗೂ ಅಮೂಲ್ಯವಾದ ದಾಖಲೆ ಪತ್ರಗಳನ್ನು ಕಳವು ಮಾಡಿದ್ದಾರೆ' ಎಂದು ಸ್ಥಳೀಯರು ಆರೋಪಿಸಿದರು.
ಕ್ರೈಸ್ತರು ಯಾವತ್ತೂ ಯಾರಿಗೂ ಅನ್ಯಾಯ ಮಾಡುವವರಲ್ಲ. ಕೆಲವು ವರ್ಷಗಳ ಹಿಂದೆ ಇಲ್ಲೊಂದು ಅಂಗನವಾಡಿ ಕೇಂದ್ರ ಸ್ಥಾಪಿಸಬೇಕು ಎಂದು ಕೇಳಿಕೊಂಡ ಮೇರೆಗೆ ಅದಕ್ಕೂ ಅವಕಾಶ ಮಾಡಿಕೊಟ್ಟಿದ್ದೇವೆ. ಈಗಲೂ ಅಷ್ಟೇ ಜಾತಿ ಭೇದವಿಲ್ಲದೆ ಎಲ್ಲರಿಗೂ ನೆರವು ನೀಡುತ್ತಿದ್ದೇವೆ. ಅದನ್ನೆಲ್ಲಾ ಸಹಿಸದ ಕೆಲವು ಮಂದಿ ನಮ್ಮ ಪ್ರಾರ್ಥನಾ ಕೇಂದ್ರವನ್ನು ಯಾರೂ ಇಲ್ಲದಾಗ ಕೆಡವಿ ಹಾಕಿದ್ದಾರೆ. ಇದನ್ನು ನಿರ್ಮಿಸಲು ನಮ್ಮ ಹಿರಿಯರು ಪಟ್ಟ ಶ್ರಮವನ್ನು ನೆನಪಿಸಲೂ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ನೋವು ತೋಡಿಕೊಂಡರು.
ಇದನ್ನು ಕೆಡವಿ ಹಾಕಲು ಸರಕಾರದ ಕೆಲವು ಇಲಾಖೆಯವರ ಸಹಕಾರವೂ ಇದೆ. ಕಾವೂರು ಠಾಣೆಯ ಪೊಲೀಸ್ ಅಧಿಕಾರಿಗಳು ನಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಸ್ಥಳೀಯ ಪೊಲೀಸರು ಸ್ಪಂದಿಸತೊಡಗಿದ್ದಾರೆ ಎಂದು ಅವರು ದೂರಿದ್ದಾರೆ. ನಮ್ಮೀ ಪ್ರಾರ್ಥನಾ ಕೇಂದ್ರವನ್ನು ಪುನಃ ಸ್ಥಾಪಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ, ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ರವಿವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.







