ಕೊಲಂಬಿಯಾ: ಅಮಝಾನ್ ಅರಣ್ಯದಲ್ಲಿ ಕಾಡ್ಗಿಚ್ಚು; ಗಾಳಿಯ ಗುಣಮಟ್ಟ ತೀವ್ರ ಕುಸಿತ

ಸಾಂದರ್ಭಿಕ ಚಿತ್ರ
ಬೊಗೊಟ, ಫೆ.6: ಕಳೆದ ಕೆಲ ದಿನಗಳಿಂದ ಕೊಲಂಬಿಯಾದ ಅಮಝಾನ್ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚಿನಿಂದಾಗಿ ರಾಜಧಾನಿ ಬೊಗೊಟದಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅರಣ್ಯದಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ ಹೊಗೆಯ ದಟ್ಟ ಮೋಡಗಳು ಗಾಳಿಯ ಜತೆ ವಸತಿ ಪ್ರದೇಶದತ್ತ ಚಲಿಸಿವೆ. ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು ಪರಿಸರ ಸಂರಕ್ಷಣೆಯ ಕ್ರಮವಾಗಿ ಪರಿಸರ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಬೊಗೊಟದ ಮೇಯರ್ ಕ್ಲಾಡಿಯಾ ಲೊಫೆರ್ ಟ್ವೀಟ್ ಮಾಡಿದ್ದಾರೆ. ಮುಂದಿನ ಕೆಲ ದಿನ ಹೊರಾಂಗಣದಲ್ಲಿ ನಡೆಯುವ ಯಾವುದೇ ದೈಹಿಕ ಚಟುವಟಿಕೆಯಿಂದ ದೂರ ಇರುವಂತೆ ಅವರು ಜನತೆಗೆ ಸೂಚಿಸಿದ್ದಾರೆ.
2016ರ ಶಾಂತಿ ಒಪ್ಪಂದವನ್ನು ವಿರೋಧಿಸುತ್ತಿರುವ ಈ ಹಿಂದಿನ ಬಂಡುಗೋರ ಸಂಘಟನೆಯ ಸದಸ್ಯರು ಜಾನುವಾರುಗಳಿಗೆ ಮೇವು ಬೆಳೆಸಲು ಮರಗಳಿಗೆ ಬೆಂಕಿ ಇಡುತ್ತಿದ್ದು ಇದರಿಂದ ಕಾಡ್ಗಿಚ್ಚು ಹಬ್ಬಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಕೇಂದ್ರದ ಗ್ವಾವಿಯೇರ್ ಪ್ರಾಂತದಲ್ಲಿ ಕಾಡ್ಗಿಚ್ಚಿನಿಂದ 10,000 ಹೆಕ್ಟೇರ್ಗಳಷ್ಟು ಅರಣ್ಯ ನಾಶವಾಗಿದ್ದು(ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ ನ ಒಟ್ಟು ವ್ಯಾಪ್ತಿಗೆ ಸಮ) ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಮೇಯರ್ ಹೇಡೀರ್ ಪಲಾಸಿಯೊ ಹೇಳಿದ್ದಾರೆ. ಜನವರಿ ತಿಂಗಳು ಅತ್ಯಧಿಕ ಉಷ್ಣತೆಯ ಅವಧಿಯಾಗಿದ್ದು ಅಧಿಕ ಉಷ್ಣಹವೆ ಕಾಡ್ಗಿಚ್ಚು ಹರಡಲು ಪೂರಕ ವಾತಾವರಣ ಕಲ್ಪಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







