ಸ್ವೀಡನ್: ಕಬ್ಬಿಣದ ಅದಿರು ಗಣಿಗಾರಿಕೆ ವಿರೋಧಿಸಿ ಗ್ರೆಟ್ಟಾ ಥನ್ಬರ್ಗ್ ನೇತೃತ್ವದಲ್ಲಿ ಪ್ರತಿಭಟನೆ

ಸ್ಟಾಕ್ಹೋಮ್, ಫೆ.6: ದೇಶದ ಉತ್ತರವಲಯದಲ್ಲಿ ಪ್ರಸ್ತಾವಿತ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ವಿರೋಧಿಸಿ ಪರಿಸರ ಹೋರಾಟಗಾರ್ತಿ ಗ್ರೆಟ್ಟಾ ಥನ್ಬರ್ಗ್ ನೇತೃತ್ವದಲ್ಲಿ ಸ್ಥಳೀಯ ಸಾಮಿ ಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಯೋಜನೆಗೆ ಅನುಮತಿ ನೀಡಿದರೆ ಶಾಶ್ವತ ನಕಾರಾತ್ಮಕ ಪರಿಣಾಮ ಉಂಟಾಗಲಿದೆ.
ಪರಿಸರ, ಹವಾಮಾನ, ಶುದ್ಧ ಗಾಳಿ, ನೀರು, ಹಿಮಸಾರಂಗಗಳ ವಂಶ, ಬುಡಕಟ್ಟು ಸಮುದಾಯದ ಹಕ್ಕುಗಳು ಮತ್ತು ಮಾನವೀಯತೆಯ ಭವಿಷ್ಯಕ್ಕೆ ಸಂಸ್ಥೆಗಳ ಅಲ್ಪಾವಧಿಯ ಲಾಭಕ್ಕಿಂತ ಅಧಿಕ ಆದ್ಯತೆ ನೀಡಬೇಕೆಂಬುದು ನಮ್ಮ ಆಶಯವಾಗಿದೆ. ಸಾಮಿ ಸಮುದಾಯದವರು ನೆಲೆಸಿರುವ ಸಾಪ್ಮಿ ಪ್ರದೇಶವನ್ನು ವಸಾಹತೀಕರಣಗೊಳಿಸುವ ಪ್ರಕ್ರಿಯೆಯನ್ನು ಸ್ವೀಡನ್ ಸರಕಾರ ನಿಲ್ಲಿಸಬೇಕು ಎಂದು ಥನ್ಬರ್ಗ್ ಹೇಳಿದ್ದಾರೆ.
ಬ್ರಿಟನ್ ಸಂಸ್ಥೆಯ ಈ ವಿವಾದಾತ್ಮಕ ಯೋಜನೆಗೆ ಸ್ವೀಡನ್ ಸರಕಾರ ಇನ್ನೂ ಹಸಿರು ನಿಶಾನೆ ತೋರಿಲ್ಲ. ಈ ಯೋಜನೆಯಿಂದ ಸುಮಾರು 300 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಂಸ್ಥೆ ಹೇಳಿದೆ. ಆದರೆ ಹಿಮಸಾರಂಗ ಸಾಕಾಣಿಕೆ, ಬೇಟೆಯಾಡುವುದು, ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಸುಮಾರು 40,000ದಷ್ಟು ಜನರಿರುವ ಸಾಮಿ ಸಮುದಾಯ ಈ ಯೋಜನೆಗೆ ತೀವ್ರ ವಿರೋಧ ಸೂಚಿಸಿದೆ. ತಮ್ಮ ಜೀವನಾಧಾರ ಕಸುವಿಗೆ ತೊಂದರೆಯಾಗುವ ಜತೆಗೆ ಪರಿಸರಕ್ಕೂ ಹಾನಿಯಾಗಲಿದೆ ಎಂದು ಸಮುದಾಯದವರು ಆಕ್ರೋಶ ಸೂಚಿಸಿದ್ದಾರೆ.







