ಜಿಎಸ್‍ಎಸ್ ಕನ್ನಡ ಸಾಹಿತ್ಯ ಲೋಕಕ್ಕೆ ಅಗ್ರಗಣ್ಯ ಲೇಖಕರನ್ನು ಕೊಟ್ಟಿದ್ದಾರೆ: ಆರ್.ಜಿ.ಹಳ್ಳಿ ನಾಗರಾಜ್
ಬೆಂಗಳೂರು, ಫೆ. 6: ಕನ್ನಡ ಸಾಹಿತ್ಯದ ಎಲ್ಲಾ ದಿಗ್ಗಜರನ್ನು ಒಗ್ಗೂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗವನ್ನು ತೆರದ ಕೀರ್ತಿ ಪ್ರೊ.ಜಿ.ಎಸ್. ಶಿವರುದ್ರಪ್ಪನವರಿಗೆ ಸಲ್ಲುತ್ತದೆ. ಹಾಗಾಗಿ ಜಿಎಸ್‍ಎಸ್ ಕನ್ನಡ ಸಾಹಿತ್ಯ ಲೋಕಕ್ಕೆ ಅಗ್ರಗಣ್ಯ ಲೇಖಕರನ್ನು ಕೊಟ್ಟಿದ್ದಾರೆ ಎಂದು ಬಂಡಾಯ ಸಾಹಿತಿ ಮತ್ತು ಚಿಂತಕ ಆರ್.ಜಿ.ಹಳ್ಳಿ ನಾಗಾರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ರವಿವಾರದಂದು ಕಲಾಗ್ರಾಮದಲ್ಲಿ ಪ್ರೊ.ಜಿ.ಎಸ್. ಶಿವರುದ್ರಪ್ಪ ಹಾಗೂ ಪ್ರೊ.ಯು.ಆರ್.ಅನಂತಮೂರ್ತಿ ಸಾಂಸ್ಕøತಿಕ ಜಗತಿ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಜಿಎಎಸ್‍ಎಸ್ ಜಯಂತಿ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಜಿಎಸ್‍ಎಸ್ ಕವಿಯಾಗಿ, ವಿಮರ್ಶಕರಾಗಿ ಮಾತ್ರವಲ್ಲದೆ, ಉತ್ತಮ ಆಡಳಿತಗಾರರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಅನಿಕೇತನವನ್ನು ಪ್ರಕಟಿಸಿದ್ದು, ಸಾಹಿತ್ಯ ವಿಚಾರಕ್ಕೆ ಹೊಸ ಆಯಾಮವನ್ನು ಕೊಟ್ಟರು. ಸಾಹಿತ್ಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಸಾಹಿತ್ಯ ಚರಿತ್ರೆಯನ್ನು ಸಂಪಾದಿಸಿ ಕೊಟ್ಟಿರುವುದು ಮುಂಬರುವ ಸಾಹಿತಿಗಳಿಗೆ ನೀಡಿದ ಮಾರ್ಗಸೂಚಿಯಂತಿದೆ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಒಗ್ಗೂಡಿಸಿ ವಾರ್ಷಿಕ ಸಂಚಿಕೆಯನ್ನು ಪ್ರಕಟಿಸಿರುವುದು ಸಾಹಿತ್ಯ ಪ್ರಜ್ಞೆಯನ್ನು ತಿಳಿಸುತ್ತದೆ ಎಂದರು.
ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಜಿಎಸ್‍ಎಸ್‍ರ ಹಾಸನದ ದಿಕ್ಸೂಚಿ ಭಾಷಣವನ್ನು ಸಾಹಿತ್ಯ ವಲಯದಲ್ಲಿ ಇಂದಿಗೂ ಉಳಿದುಕೊಂಡಿದೆ. ಕೆಲಸದಲ್ಲಿ ಯಾರಿಗೂ ಹೊರಹಾಕ ಇವರು ಅಪಾರ ಶಿಷ್ಯವರ್ಗವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಮಾತನಾಡಿ, ಕವಿಯು ಕುಟುಂಬದ ಆಸ್ತಿಯಾಗದೆ, ಸಾರ್ವಜನಿಕ ಆಸ್ತಿಯಾಗಿರುತ್ತಾನೆ. ಹಾಗಾಗಿ ಸರಕಾರವು ಜಿಎಸ್‍ಎಸ್‍ರ ಸಮಾಧಿಯನ್ನು ಕಲಾಗ್ರಾಮದಲ್ಲಿ ನಿರ್ಮಾಣವಾಗಿದೆ. ಆದರೆ ಕಲಾಗ್ರಾಮವು ಸಮಾಧಿ ತಾಣವಾಗದೆ, ಸಾಂಸ್ಕøತಿಕ ತಾಣವಾಗಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಚಿಂತಕ ಸಿರಿಮನೆ ನಾಗರಾಜ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಣ್ಣ ವಿವಾದಗಳನ್ನು ದೊಡ್ಡ ವಿವಾದಗಳಾಗಿ ಪರಿವರ್ತಿಸಿ, ಜನರನ್ನು ಒಡೆದು ದೇಶವೇ ಹೊತ್ತಿ ಉರಿಯುವಂತೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಂಜಸವಾಗುವ ಜಿಎಸ್‍ಎಸ್‍ರ ವಿಚಾರಗಳನ್ನು ಚರ್ಚೆಗೆ ತರಬೇಕು ಎಂದರು.
ಎನ್‍ಎಸ್‍ಟಿಯ ನಿರ್ದೇಶಕಿ ವೀಣಾ ಮಾತನಾಡಿ, ಸರಕಾರವು ಭೂಮಿಯನ್ನು ಎನ್‍ಎಸ್‍ಟಿಗೆ ವರ್ಗಾವಣೆ ಮಾಡಿದ್ದರೂ, ಇಲ್ಲಿರುವ ಕವಿಗಳ ಸಮಾಧಿಗಳಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ. ಬದಲಾಗಿ ಜಿಎಸ್‍ಎಸ್‍ರ ಸಾಹಿತ್ಯವನ್ನು ರಂಗಭೂಮಿಗೆ ತರುವ ಕೆಲಸವನ್ನು ಮಾಡುತ್ತೇವೆ. ಕನ್ನಡ ಸಾಹಿತಿಗಳ ಕೆಲಸವನ್ನು ಭಾರತೀಯ ರಂಗಭೂಮಿಯಲ್ಲಿ ರಾರಾಜಿಸುವಂತೆ ಮಾಡುಬೇಕು ಎಂದು ತಿಳಿಸಿದರು.
`ಎರಡು ವರ್ಷಗಳಿಂದ ಅಸಂಘಟಿತ ಕಲಾವಿದರು ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ನೀಡಿದ್ದ ಅನುದಾನವನ್ನು ಸರಕಾರವು ಮತ್ತೇ ವಾಪಸ್ಸು ಪಡೆದುಕೊಂಡಿರುವುದರಿಂದ ರಂಗಭೂಮಿ, ಸಂಗೀತ ವಾದ್ಯ, ಸುಗಮ ಸಂಗೀತ ಕಲಾವಿದರ ಕುಟುಂಬಗಳು ಬೀದಿಪಾಲಗಿವೆ. ಅಲ್ಲದೆ, ಕೊವೀಡ್ ನೆಪವೊಡ್ಡಿ ಅವೈಜ್ಞಾನಿಕ ನಿಯಮಗಳನ್ನು ರಾಜ್ಯ ಸರಕಾರವು ಜಾರಿಗೊಳಿಸುತ್ತಿದೆ. ಕಲಾವಿದರ ಸಭೆ ಸಮಾರಂಭಗಳಿಗೆ ಅವಕಾಶ ನೀಡದೆ, ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ವಿನಾಯಿತಿ ನೀಡಿರುವುದರಿಂದ ಅಸಂಘಟಿತ ಕಲಾವಿದರು ಅತಂತ್ರರಾಗಿದ್ದಾರೆ. ಸಿನೆಮಾ ಸಮಾರಂಭಗಳಿಗೆ ಹೋಗುವ ಮುಖ್ಯಮಂತ್ರಿಗಳು, ಕಲಾವಿರ ಕಾರ್ಯಕ್ರಮವನ್ನು ನಿರ್ಲಕ್ಷಿಸುತ್ತಿದ್ದಾರೆ'
-ಕುಮಾರ್, ರಂಗಭೂಮಿ ಕಲಾವಿದ







