ಬಂಧಿತ ಕಾಶ್ಮೀರಿ ಪತ್ರಕರ್ತನಿಗೆ 10 ದಿನಗಳ ಪೊಲೀಸ್ ಕಸ್ಟಡಿ

ಶ್ರೀನಗರ,ಫೆ.6: ಸಾಮಾಜಿಕ ಮಾಧ್ಯಮಗಳಲ್ಲಿ ‘ದೇಶವಿರೋಧಿ’ ವಿಷಯಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾ ಪೊಲೀಸರಿಂದ ಶುಕ್ರವಾರ ಬಂಧಿಸಲ್ಪಟ್ಟ ಸುದ್ದಿ ಜಾಲತಾಣ ‘ದಿ ಕಾಶ್ಮೀರ ವಾಲಾ’ದ ಮುಖ್ಯ ಸಂಪಾದಕ ಫಹಾದ್ ಶಾ ಅವರಿಗೆ ಫುಲ್ವಾಮಾದ ನ್ಯಾಯಾಲಯವೊಂದು ಶನಿವಾರ 10 ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ. ಭೀತಿವಾದದ ವೈಭವೀಕರಣ,ಸುಳ್ಳು ಸುದ್ದಿಗಳ ಹರಡುವಿಕೆ ಹಾಗೂ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪಗಳಲ್ಲಿ ಶಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಕಕ್ಷಿದಾರರ ವಿರುದ್ಧ ನಿಖರವಾಗಿ ಯಾವ ಆರೋಪವನ್ನು ಹೊರಿಸಲಾಗಿದೆ ಎನ್ನುವುದನ್ನು ಇನ್ನೂ ತಮಗೆ ಸ್ಪಷ್ಟಪಡಿಸಲಾಗಿಲ್ಲ, ಹೀಗಾಗಿ ಅವರಿಗೆ ಜಾಮೀನು ಕೋರಿ ಅರ್ಜಿಯನ್ನೂ ಸಲ್ಲಿಸಲಾಗಿದೆ ಎಂದು ಶಾ ಅವರ ವಕೀಲ ಉಮೈರ್ ರೋಂಗಾ ತಿಳಿಸಿದರು.
ಸೋಮವಾರ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ವರದಿ ನಮಗೆ ಲಭಿಸಲಿದೆ ಮತ್ತು ನಿಖರವಾದ ಆರೋಪವೇನು ಎನ್ನುವುದು ನಮಗೆ ಗೊತ್ತಾಗಲಿದೆ ಎಂದು ಆಶಿಸಿದ್ದೇವೆ ಎಂದರು.
Next Story





