ಬಿಜೆಪಿ ವಿದ್ಯಾರ್ಥಿಗಳ ಭಾವನೆಗಳನ್ನು ಕೆರಳಿಸಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ: ಡಿ.ಕೆ.ಶಿವಕುಮಾರ್
ಪಡುಬಿದ್ರಿ, ಫೆ.7: ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ನೀಡಿದ ಹೇಳಿಕೆಯೇ ಪಕ್ಷದ ಅಧಿಕೃತ ನಿಲುವಾಗಿದೆ. ನಾವು ಅದಕ್ಕೆ ಬದ್ಧರಾಗಿದ್ದೇವೆ. ವಿವಾದ ಈಗ ನ್ಯಾಯಾಲಯದಲ್ಲಿ ರುವುದರಿಂದ ಈ ಬಗ್ಗೆ ಹೆಚ್ಚಿನ ಅಭಿಪ್ರಾಯ ನೀಡಲಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ತೆಂಕಎರ್ಮಾಳದ ರಾಜೀವ್ ಗಾಂಧಿ ನ್ಯಾಷನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜುಕೇಷನ್‌ನಲ್ಲಿ ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಶಿಬಿರ ಹಾಗೂ ಒಂದು ದಿನದ ಕಾರ್ಯಾಗಾರದ ಉದ್ಘಾಟನೆಯ ಬಳಿಕ ಕರೆದ ಸುದ್ದಿಗೋಷ್ಠಿ ಯಲ್ಲಿ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತಿದ್ದರು.
ನಮಗೆ ನಮ್ಮ ಸಂವಿಧಾನವಿದೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವನ್ನು ನಾವು ಒಪ್ಪಿಕೊಂಡಿದ್ದೇವೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ನಿಲುವನ್ನು ನಾವು ಹೊಂದುವುದಿಲ್ಲ. ಆದರೆ ಬಿಜೆಪಿ ಹಿಜಾಬ್ ವಿಷಯವನ್ನು ರಾಜಕೀಯ ಗೊಳಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಬೆಂಕಿ ಹಚ್ಚುವ ಕಾರ್ಯದಲ್ಲಿ ನಿರತವಾಗಿದೆ ಎಂದವರು ಆರೋಪಿಸಿದರು.
ಬಿಜೆಪಿ ಜಿಲ್ಲೆಯ ಸೌಹಾರ್ದದ ಬದುಕಿಗೆ ಕೊಳ್ಳಿ ಇಡುತ್ತಿದೆ. ಇಲ್ಲಿನ ಮಕ್ಕಳ ಮನಸ್ಸಿನಲ್ಲಿ ಕೋಮು ಭಾವನೆಯ ವಿಷಬೀಜ ಬಿತ್ತಿ, ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. ಈ ವಿಷಯದಲ್ಲಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಬೆಂಗಳೂರು ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದ ವೇಳೆ ವಾಜಪೇಯಿ, ದೇಶವಿಂದು ಕರ್ನಾಟಕದ ಮೂಲಕ ಗುರುತಿಸಿಕೊಳ್ಳುತ್ತಿದೆ ಎಂದು ಹೇಳಿದ್ದರು ಎಂದರು.
ಆದರೆ ಬಿಜೆಪಿ ಇಂದು ನಡೆಸುತ್ತಿರುವ ಕೋಮು ರಾಜಕೀಯ ಜಿಲ್ಲೆಯ ಹಾಗೂ ರಾಜ್ಯದ ಆರ್ಥಿಕತೆ ದೊಡ್ಡ ಏಟು ನೀಡುತ್ತದೆ. ಮಕ್ಕಳನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ರಾಜಕೀಯದಿಂದ ಮನಸ್ಸಿಗೆ ತೀರಾ ನೋವುಂಟಾಗಿದೆ ಎಂದರು.
ಸಿ.ಎಂ.ಇಬ್ರಾಹಿಂ ಅವರು ತಮ್ಮ ಮೇಲೆ ನಡೆಸಿದ ವಾಗ್ದಾಳಿ ಕುರಿತು ಅವರ ಗಮನ ಸೆಳೆದಾಗ, ಅವರನ್ನು ಎಂಎಲ್‌ಸಿ ಮಾಡಿದ್ದೇವೆ, ನಾಯಕರಾಗಿ ಪರಿಗಣಿಸಿದ್ದೇವೆ. ಅವರಿಗೆ ಮಾತನಾಡುವ ಸ್ವಾತಂತ್ರವಿದೆ. ಸಮಯ ಬಂದಾಗ ಕಾಂಗ್ರೆಸ್‌ನ ಉತ್ತರವನ್ನು ನೀಡುತ್ತೇನೆ ಎಂದರು.
ದೇಶವು ಕಂಟಕವನ್ನು ಎದುರಿಸುತ್ತಿದೆ. ಉದ್ಯಮಗಳು ನೆಲಕಚ್ಚಿವೆ. ಕೊರೋನೋತ್ತರ ಪರಿಹಾರಗಳು ಜನರನ್ನು ತಲುಪಿಲ್ಲ. ಇಂಥ ಸಮಯದಲ್ಲಿ ಬಿಜೆಪಿ ಜನರ ಕೋಮು ಭಾವನೆ ಕೆರಳಿಸಿ ರಾಜಕೀಯ ಮಾಡುತ್ತಿದೆ. ಹೀಗಾಗಿ ಜನರು ಕಾಂಗ್ರೆಸ್‌ನತ್ತ ಒಲವು ತೋರಿಸುತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಬಿ.ಎಲ್.ಶಂಕರ್, ಮಂಜುನಾಥ ಭಂಡಾರಿ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಹರೀಶ್‌ಕುಮಾರ್, ಎಂ.ಎ.ಗಫೂರ್ ಮುಂತಾದವರಿದ್ದರು.