ಜೀವನದಲ್ಲಿ ಬದಲಾವಣೆಗೆ ಸದಾ ಅವಕಾಶ: ನ್ಯಾ. ಮುರಳೀಧರ ಪೈ
ಅಪರಾಧದಿಂದ ಮುಕ್ತಗೊಂಡವರಿಗಾಗಿ ಸುಧಾರಣಾ ಸಭೆ

ಮಂಗಳೂರು : ಮನುಷ್ಯನಿಂದ ತಪ್ಪುಗಳು ನಡೆಯುತ್ತವೆ. ಆದರೆ ಆ ತಪ್ಪನ್ನು ಮತ್ತೆ ಮತ್ತೆ ಮಾಡದೆ ತಿದ್ದಿ ಮುನ್ನಡೆದರೆ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ. ಅಲ್ಲದೆ ಜೀವನದಲ್ಲಿ ಬದಲಾವಣೆಗೆ ಸದಾ ಅವಕಾಶವಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಬಿ. ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ನಗರದ ವೆಲೆನ್ಸಿಯಾದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಸಭಾಂಗಣದಲ್ಲಿ ಅಪರಾಧದಿಂದ ಮುಕ್ತಗೊಂಡವರಿಗಾಗಿ (ಎಂಒಬಿ ಪಟ್ಟಿ) ಸೋಮವಾರ ಆಯೋಜಿಸಲಾಗಿದ್ದ ಸುಧಾರಣಾ ಸಭೆಯಲ್ಲಿ ಅವರು ಮಾತನಾಡಿದರು.
ಯಾರು ಆತ್ಮಸಾಕ್ಷಿಯನ್ನು ಕೇಳಿ ಅದಕ್ಕೆ ಬೆಲೆ ಕೊಡುತ್ತಾರೋ ಅವರಿಂದ ಅಪರಾಧ ನಡೆಯಲು ಸಾಧ್ಯವಿಲ್ಲ ಅಪರಾಧ ಮಾಡಿ ಶಿಕ್ಷೆ ಅನುಭವಿಸಿದವರು ತಮ್ಮ ಮಕ್ಕಳು, ಕುಟುಂಬ, ಸಮಾಜಕ್ಕೆ ಕಿವಿಮಾತು ಹೇಳಿ ಅಪರಾಧ ಚಟುವಟಿಕೆಗಳಲ್ಲಿ ಯಾರೂ ಭಾಗಿಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶ ಮುರಳೀಧರ ಪೈ ಬಿ. ಕರೆ ನೀಡಿದರು.
ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 3,000ಕ್ಕೂ ಅಧಿಕ ರೌಡಿಶೀಟರ್‌ಗಳ ಪೈಕಿ ಉತ್ತಮ ಗುಣನಡತೆಯ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ 1,258 ರೌಡಿಶೀಟರ್‌ಗಳ ರೌಡಿಶೀಟ್‌ನ್ನು ಮುಕ್ತಾಯಗೊಳಿಸಲಾಗಿತ್ತು. ಇದೀಗ ಸೊತ್ತು ಕಳವು ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿ ಎಂಒಬಿ ಕಾರ್ಡ್ ಹೋಲ್ಡರ್‌ಗಳಾಗಿದ್ದ 528 ಮಂದಿಯ ಪಟ್ಟಿ ಮುಕ್ತಾಯಗೊಳಿಸಲಾಗಿದೆ ಎಂದರು.
ಸೊತ್ತು ಕಳವಿನಂತಹ ಪ್ರಕರಣಗಳಲ್ಲಿ ಪಾಲ್ಗೊಂಡವರ ಪಟ್ಟಿಯೂ ಪೊಲೀಸರ ಬಳಿ ಇರುತ್ತದೆ. ಇದನ್ನು ಎಂಒಬಿ ಕಾರ್ಡ್ ಎಂದು ಕೂಡ ಕರೆಯಲಾಗುತ್ತದೆ. ಈ ರೀತಿ ಪಟ್ಟಿಯಲ್ಲಿರುವವರನ್ನು ವಿವಿಧ ಪ್ರಕರಣಗಳ ಸಂದರ್ಭದಲ್ಲಿ ವಿಚಾರಿಸಲಾಗುತ್ತದೆ. ಆದರೆ ಹಲವು ವರ್ಷಗಳ ಹಿಂದೆಯೇ ಇಂತಹ ಚಟುವಟಿಕೆಯನ್ನು ನಿಲ್ಲಿಸಿರುವ ಅನೇಕ ಮಂದಿ ಅವರನ್ನು ಪಟ್ಟಿಯಿಂದ ಮುಕ್ತಾಯಗೊಳಿಸಲು ಮನವಿ ಮಾಡಿದ್ದರು. ಹಾಗಾಗಿ ಅವರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇದೊಂದು ಬದಲಾವಣೆಗೆ ಅವಕಾಶವಾಗಿದ್ದು ಉತ್ತಮ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳ ಬೇಕು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
ವೇದಿಕೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ರೋಶನಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಉಪಪ್ರಾಂಶುಪಾಲೆ ಡಾ. ಜೆನಿಸ್ ಮೇರಿ ಉಪಸ್ಥಿತರಿದ್ದರು.
ರೌಡಿಶೀಟ್ ಮುಕ್ತಾಯಗೊಂಡವರ ಪರವಾಗಿ ಮಾತನಾಡಿದ ಉಮೇಶ್, ಭೀಮಪ್ಪ, ಚಂದ್ರಪ್ಪ ಅವರು ತಾವು ಈಗ ಸಂತೋಷದ ಜೀವನ ನಡೆಸುತ್ತಿರುವುದಾಗಿ ಅನಿಸಿಕೆ ಹಂಚಿಕೊಂಡರು.
528 ಮಂದಿಗೆ ಮುಕ್ತಿ
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2021ರ ಡಿಸೆಂಬರ್ ಅಂತ್ಯದವರೆಗೆ 3,284 ಮಂದಿ ಎಂಒಬಿಗಳಿದ್ದರು. ಇದರಲ್ಲಿ ಇತ್ತೀಚೆಗೆ 528 ಮಂದಿಯ ಎಂಒಬಿ ಕಾರ್ಡ್ ಮುಕ್ತಾಯ ಮಾಡಲಾಗಿದೆ. ಆ ಪೈಕಿ 65 ವರ್ಷಕ್ಕಿಂತ ಹೆಚ್ಚಾದವರು 29, ಮೃತಪಟ್ಟವರು 58, ತೀವ್ರ ಅನಾರೋಗ್ಯದಲ್ಲಿರುವವರು 14 ಮತ್ತು ಓರ್ವರು ಅಂಗವಿಕಲರು ಸೇರಿದ್ದಾರೆ. ಯಾವುದೇ ಚಟುವಟಿಕೆ ಇಲ್ಲದ 398 ಮಂದಿಯ ಎಂಒಬಿ ಹಾಳೆಗಳನ್ನು ಮುಕ್ತಾಯ ಮಾಡಲಾಗಿದ್ದು ಆ ಪೈಕಿ 25 ವರ್ಷಗಳಿಂದ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದವರು 37 ಮಂದಿ, 20 ವರ್ಷಗಳಿಂದ ಯಾವುದೇ ಅಕ್ರಮ ಚಟುವಟಿಗೆಳಲ್ಲಿ ಭಾಗಿಯಾಗದ 43 ಮಂದಿ, ಕಳೆದ 15 ವರ್ಷಗಳಿಂದ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದ 137 ಮಂದಿ, ಕಳೆದ 10 ವರ್ಷಗಳಿಂದ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದವರು 184 ಮಂದಿ ಹಾಗೂ ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 5 ವರ್ಷಗಳಿಂದ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದವರು 25 ಮಂದಿ ಸೇರಿದ್ದಾರೆ. ಪ್ರಸ್ತುತ ಕಮಿಷನರೆಟ್ ವ್ಯಾಪ್ತಿಯಲ್ಲಿ 2,784 ಎಂಒಬಿಗಳಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.