ಹಿಜಾಬ್‌ಗೆ ಅವಕಾಶ ನಿರಾಕರಣೆ ಖಂಡಿಸಿ ಪ್ರತಿಭಟನೆ

ಮಂಗಳೂರು, ಫೆ.7: ರಾಜ್ಯದ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿರುವುದನ್ನು ಖಂಡಿಸಿ ‘ಸಂವಿಧಾನ ಸಂರಕ್ಷಣಾ ಮಹಿಳಾ ಸಮಿತಿ’ಯ ವತಿಯಿಂದ ಸೋಮವಾರ ಗುರುಪುರ ಕೈಂಕಬದಲ್ಲಿ ಪ್ರತಿಭಟನಾ ಸಭೆ ನಡೆಸಿತು.
ಸಂಪೂರ್ಣ ವಸ್ತ್ರಧಾರಣೆ ನನ್ನ ಹಕ್ಕು. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರಾಕರಣೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಿರಾಕರಣೆಯಾಗಿದೆ. ಸಂವಿಧಾನ, ಕಾನೂನುಗಳು ಅಸ್ವಿತ್ವದಲ್ಲಿರುವಾಗ ಅದನ್ನು ಉಲ್ಲಂಘಿಸಲು ಯಾವುದೇ ಆಡಳಿತ ಕಾನೂನಿಗೆ ಹಕ್ಕಿಲ್ಲ ಇತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.
ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡಿ ವಿದ್ಯಾರ್ಥಗಳ ಶಿಕ್ಷಣ ತಡೆಯಬಹುದು ಎಂಬುದು ಸಂಘಿಗಳ ಭ್ರಮೆಯಾಗಿದೆ. ಸ್ಕಾರ್ಫ್ ಹೋರಾಟ ಮುಂದುವರಿಯಲಿದೆ. ಎನ್‌ಆರ್‌ಸಿ ಹೇರಿಕೆಗೆ ವಿಫಲ ಪ್ರಯತ್ನ ನಡೆಸಿದವರು ಮತ್ತು ಲವ್ ಜಿಹಾದ್ ಎಂಬ ಸುಳ್ಳು ಪ್ರಚಾರ ನಡೆಸಿ, ಕೈಸುಟ್ಟುಕೊಂಡಿರುವವರು ಈಗ ಮುಸ್ಲಿಂ ಹೆಣ್ಣು ಮಕ್ಕಳ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದಕ್ಕೆ ನಾವೆಂದೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಮೂಲಭೂತ ಹಕ್ಕಿಗಾಗಿ ಹೋರಾಟ ಮುಂದುವರಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಎಲ್ಲರೂ ಬೆಂಬಲ ನೀಡುವ ಅಗತ್ಯವಿದೆ. ಹಿಂದಿನಿಂದಲೂ ಹಿಜಾಬ್ ಧರಿಸಿಕೊಂಡು ಹೋಗುತ್ತಿದ್ದ ಶಾಲೆ, ಕಾಲೇಜುಗಳಲ್ಲಿ ಈಗ ಏಕಾಏಕಿಯಾಗಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸದಿರುವುದು ಪ್ರಶ್ನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಹಿಂದೂಗಳಿಂದಲೇ ತಿರುಗೇಟಿ ಗೊಳಗಾದ ಬಿಜೆಪಿ ಮತ್ತು ಸಂಘ ಪರಿವಾರಗಳು ಈಗ ಹಿಂದೂಗಳ ಮನಪರಿವರ್ತಿಸಲು ಹಿಜಾಬ್‌ನಂತಹ ವಿಷಯ ಎಳೆದು ತಂದು, ಕೋಮು ರಾಜಕೀಯ ಮಾಡುತ್ತಿವೆ ಎಂದು ಆಪಾದಿಸಿದರು.
ಸಮಿತಿಯ ಅಧ್ಯಕ್ಷೆ ಶೈನಾಝ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಅಫ್ರಾ ಕೈಕಂಬ, ಸಮಿತಿಯ ನಾಯಕಿಯರಾದ ಶಾಕಿರಾ ಬಜ್ಪೆ, ಶಾಹಿದಾ ಯೂಸುಫ್ ಮಾತನಾಡಿದರು. ರೇಶ್ಮಾ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.







