ಶ್ರೀಲಂಕಾ: ಚರ್ಚ್ ಗಳಲ್ಲಿ ಸರಣಿ ಬಾಂಬ್ ಸ್ಪೋಟ ಪ್ರಕರಣ; ಮಾನವ ಹಕ್ಕು ಕಾರ್ಯಕರ್ತಗೆ ಜಾಮೀನು ಮಂಜೂರು

ಸಾಂದರ್ಭಿಕ ಚಿತ್ರ
ಕೊಲಂಬೊ, ಫೆ.7: ಶ್ರೀಲಂಕಾದಲ್ಲಿ 2019ರಲ್ಲಿ 3 ಕ್ಯಾಥೊಲಿಕ್ ಚರ್ಚ್ ಹಾಗೂ 3 ಐಷಾರಾಮಿ ಹೋಟೆಲ್ಗಳಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಬಂಧಿತ ಆರೋಪಿ, ಪ್ರಮುಖ ಮಾನವ ಹಕ್ಕು ಕಾರ್ಯಕರ್ತ ಮತ್ತು ನ್ಯಾಯವಾದಿ ಹೆಜಾರ್ ಹಿಜ್ಬುಲ್ಲಾಗೆ ಶ್ರೀಲಂಕಾದ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರುಗೊಳಿಸಿದೆ.
2019ರಲ್ಲಿ ಈಸ್ಟರ್ ಹಬ್ಬದ ಸಂದರ್ಭ ನಡೆದ ಈ ಬಾಂಬ್ ಸ್ಫೋಟದಲ್ಲಿ 11 ಭಾರತೀಯರ ಸಹಿತ 270 ಮಂದಿ ಬಲಿಯಾಗಿದ್ದರು. ಸ್ಥಳೀಯ ಉಗ್ರವಾದಿಗಳ ಸಂಘಟನೆ ನ್ಯಾಷನಲ್ ತೌಹೀದ್ ಜಮಾತ್ ನ 9 ಆತ್ಮಹತ್ಯಾ ಬಾಂಬರ್ ಗಳು ಈ ಬಾಂಬ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕೈವಾಡ ಇರುವ ಆರೋಪದಲ್ಲಿ ಪ್ರಮುಖ ಮಾನವಹಕ್ಕು ನ್ಯಾಯವಾದಿ ಮತ್ತು ಕಾರ್ಯಕರ್ತ ಹೆಜಾರ್ ಹಿಜ್ಬುಲ್ಲಾನನ್ನು 2020ರ ಎಪ್ರಿಲ್ 14ರಂದು ಭಯೋತ್ಪಾದನೆ ತಡೆ ಕಾಯ್ದೆಯಡಿ ಶ್ರೀಲಂಕಾ ಭದ್ರತಾ ಪಡೆ ಬಂಧಿಸಿತ್ತು. ಆದರೆ ಯಾವುದೇ ಆರೋಪ ದಾಖಲಿಸಿರಲಿಲ್ಲ.
ಇವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರ ಪಟ್ಟಲಂ ನಗರ ನ್ಯಾಯಾಲಯ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಅವರು ಕೊಲಂಬೊದ ಮೇಲ್ಮನವಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಮಂಗಳವಾರ ಯುರೋಪಿಯನ್ ಯೂನಿಯನ್ನ ಮಾನವ ಹಕ್ಕುಗಳಿಗಾಗಿನ ಉಪಸಮಿತಿಯ ಜತೆ ಶ್ರೀಲಂಕಾ ಸರಕಾರ ಮಾತುಕತೆ ನಡೆಸಲಿರುವ ಹಿನ್ನೆಲೆಯಲ್ಲಿ ಈ ಜಾಮೀನು ಆದೇಶಕ್ಕೆ ಮಹತ್ವವಿದೆ.
ವಿವಾದಾತ್ಮಕ ಭಯೋತ್ಪಾದನೆ ತಡೆ ಕಾಯ್ದೆಯನ್ನು ರದ್ದುಗೊಳಿಸುವಂತೆ ಯುರೋಪಿಯನ್ ಯೂನಿಯನ್ ಶ್ರೀಲಂಕಾದ ಮೇಲೆ ನಿರಂತರ ಒತ್ತಡ ಹೇರುತ್ತಿದೆ. ಭಯೋತ್ಪಾದನೆ ತಡೆ ಕಾಯ್ದೆಯಡಿ ಯಾವುದೇ ವ್ಯಕ್ತಿಯನ್ನು ಆರೋಪ ದಾಖಲಿಸದೆ 90 ದಿನ ಬಂಧನದಲ್ಲಿಡಬಹುದು ಮತ್ತು ಬಂಧನದ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ.







