ಹಿಜಾಬ್ ಗೆ ತಡೆ ನಾಝಿ ಪ್ರೇರಿತ ಅಜೆಂಡಾ: ಝೀನತ್ ಗೂಡಿನಬಳಿ

ಬಂಟ್ವಾಳ, ಫೆ.7: ಯೂನಿವರ್ಸಿಟಿಯಲ್ಲಿ ಯಹೂದಿ ಸಮುದಾಯದ ವಿದ್ಯಾರ್ಥಿಗಳು ಶಿರ ವಸ್ತ್ರ ಧರಿಸುವುದನ್ನು ತಡೆಯುತ್ತಿದ್ದ ನಾಝಿಗಳಿಂದ ಪ್ರೇರಿತರಾದ ಇಂಡಿಯಾದ ಬಲಪಂಥೀಯ ಸಂಘಟನೆಗಳು ಇಲ್ಲಿನ ಶಾಲಾ ಕಾಲೇಜಿನಲ್ಲಿ ಅದನ್ನೇ ಜಾರಿ ಮಾಡಲು ಪ್ರಯತ್ನಿಸುತ್ತಿವೆ ಎಂದು ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಗೂಡಿನಬಳಿ ಹೇಳಿದರು.
ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ಗೆ ನಿಷೇಧ ವಿಧಿಸಿರುವ ಕ್ರಮವನ್ನು ಖಂಡಿಸಿ ಮುಸ್ಲಿಮ್ ಸಂಘಟನೆಗಳ ಒಕ್ಕೂಟದಿಂದ ಬಿ.ಸಿ.ರೋಡ್ ಕೈಕಂಬದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಹಿಜಾಬ್ ಗೆ ನಿಷಿದ್ಧ ಕೇವಲ ಸಮವಸ್ತ್ರದ ವಿಚಾರ ಅಲ್ಲ. ಅದು ಇಸ್ಲಾಮೋಫೋಬಿಯಾದ ಭಾಗವಾಗಿದೆ. ಮುಸ್ಲಿಮ್ ಮಹಿಳೆಯರನ್ನು ಧಾರ್ಮಿಕ ಚೌಕಟ್ಟಿನಿಂದ, ಸಮಾಜದಿಂದ ಹಾಗೂ ಶಿಕ್ಷಣದಿಂದ ದೂರ ಸರಿಸುವ ಪ್ರಯತ್ನದ ಒಂದು ಭಾಗವೂ ಆಗಿದೆ. ಇದು ಇಂದು ನಿನ್ನೆಯ ಅಥವಾ ಕೇವಲ ಒಬ್ಬ ಅಧ್ಯಾಪಕನ ತೀರ್ಮಾನ ಎಂದು ಭಾವಿಸಬಾರದು. ಇದು ಸಂಘ ಪರಿವಾರದ ಯೋಜನಾ ಬದ್ಧ ಗುಪ್ತ ಅಜೆಂಡಾದ ಭಾಗವಾಗಿದೆ ಎಂದು ಅವರು ಹೇಳಿದರು.
ಶಿರ ವಸ್ತ್ರ ಎಂಬುದು ಮುಸ್ಲಿಮ್ ಮಹಿಳೆಯರಿಗೆ ಮಾತ್ರ ಸೀಮಿತವಾದ ಪದ್ಧತಿ ಅಲ್ಲ. ಅದು ಎಲ್ಲಾ ಧರ್ಮಗಳಲ್ಲೂ ಇರುವ ಪದ್ಧತಿಯಾಗಿದೆ. ಸಂಘಪರಿವಾರ ಶಿರವಸ್ತ್ರವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವ ಹಾಗೂ ವಿವಾದಿತ ವಸ್ತುವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದಕ್ಕೆ ಇಲ್ಲಿನ ಶಾಸಕಾಂಗ ಮತ್ತು ಕಾರ್ಯಾಂಗ ಸಾಥ್ ನೀಡುತ್ತಿರುವುದು ಸಂವಿಧಾನದ ಅಡಕವಾಗಿದೆ ಎಂದು ಅವರು ಹೇಳಿದರು.
ವಸ್ತ್ರ ಧಾರಣೆ ಸಂವಿಧಾನ ಬದ್ಧ ಹಕ್ಕಾಗಿದೆ. ಅದನ್ನು ಕಸಿಯುವ ಪ್ರಯತ್ನ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ವಿರೋಧಿ ಅಜೆಂಡಾದ ವಿರುದ್ಧ ವಿದ್ಯಾರ್ಥಿಗಳ ಹೋರಾಟ ಶಾಘ್ಲನೀಯ. ಅನ್ಯಾಯದ ವಿರುದ್ಧ ಎಲ್ಲರೂ ಗಟ್ಟಿ ಧ್ವನಿಯಾಗಬೇಕು ಎಂದರು.
ವಿದ್ಯಾರ್ಥಿನಿ ಅಫ್ರಾ ಮಾತನಾಡಿದರು. ಅಫ್ರಿನಾ ಮೊದಲಾದವರು ಉಪಸ್ಥಿತರಿದ್ದರು. ಝೈಬುನ್ನಿಸ್ಸಾ ಕಾರ್ಯಕ್ರಮ ನಿರೂಪಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಕುಮಾರಿ ಬಿ.ಕೆ. ಸ್ವಾಗತಿಸಿದರು. ಪ್ರಕಾಶ ಶೆಣೈ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭವಾನಿ ಶೆಟ್ಟಿ ವಂದಿಸಿದರು.