ಪೆಗಾಸಸ್: ಸುಳ್ಳು ಹೇಳಿದ ಸರಕಾರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶ ಯಾವುದೇ ಇರಲಿ, ಅಧಿಕಾರದಲ್ಲಿರುವ ಸರ್ವಾಧಿಕಾರಿಗೆ ಸದಾ ತನ್ನ ಕುರ್ಚಿಯ ಚಿಂತೆ. ಸರ್ವಾಧಿಕಾರಿ ವ್ಯಕ್ತಿಯಾಗಿರಲಿ ಅಥವಾ ಪಟ್ಟಭದ್ರ ಹಿತಾಸಕ್ತರ ಕೂಟವಾಗಿರಲಿ ಅವರು ಅಧಿಕಾರ ಉಳಿಸಿಕೊಳ್ಳಲು ಎಲ್ಲ ಅಡ್ಡ ದಾರಿಗಳನ್ನು ಹಿಡಿಯುತ್ತಾರೆ. ಭಾರತದಲ್ಲಿ ಇಸ್ರೇಲ್ ಬೇಹುಗಾರಿಕೆ ಕುತಂತ್ರಾಂಶ ಪೆಗಾಸಸ್ ಅನ್ನು ಭಾರತ ಸರಕಾರ ಖರೀದಿಸಿರುವುದು ಯಾಕೆಂಬುದು ಈಗ ಗುಟ್ಟಾಗಿ ಉಳಿದಿಲ್ಲ.
ಚುನಾವಣಾ ಆಯೋಗ, ರಾಜಕೀಯ ಪಕ್ಷಗಳ ನಾಯಕರು, ಸುಪ್ರೀಂ ಕೋರ್ಟ್ ತನಿಖಾಧಿಕಾರಿಗಳ ಮೇಲೆ ಬೇಹುಗಾರಿಕೆ ನಡೆಸಲು ಮಾತ್ರವಲ್ಲ ತನ್ನದೇ ನಾಗರಿಕರ ಮೇಲೆ ಇದನ್ನು ಪ್ರಯೋಗಿಸಲು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ 2017ರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಒಪ್ಪಂದ ದ ಭಾಗವಾಗಿ ಬೇಹುಗಾರಿಕೆ ನಡೆಸುವ ಕುತಂತ್ರಾಂಶ ಪೆಗಾಸಸ್‌ನ್ನು ಖರೀದಿ ಮಾಡಿತ್ತು. ಈ ಒಪ್ಪಂದದ ಮೊತ್ತ 2 ಬಿಲಿಯನ್ ಡಾಲರ್ (14.93 ಸಾವಿರ ಕೋಟಿ ರೂಪಾಯಿ) ಎಂದು ಬಹಿರಂಗವಾಗಿದೆ. ತನಿಖಾ ಪತ್ರಕರ್ತರ ಒಕ್ಕೂಟ ಇದನ್ನು ಬಹಿರಂಗಗೊಳಿಸಿದ ನಂತರ ಒಕ್ಕೂಟ ಸರಕಾರ ಇದಕ್ಕೂ ತನಗೂ ಸಂಬಂಧವಿಲ್ಲ, ಇದರಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟ ಪಡಿಸಿತ್ತು. ಆದರೆ ಭಾರತ ಸರಕಾರ ಪೆಗಾಸಸ್ ಬೇಹುಗಾರಿಕೆ ಕುತಂತ್ರಾಂಶವನ್ನು ಖರೀದಿಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಬಂದ ವರದಿಗಳಿಂದ ಸಹಜವಾಗಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ಇದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ. ಸಂಸತ್ತು ಮತ್ತು ಸುಪ್ರೀಂ ಕೋರ್ಟಿಗೆ ಮಾಡಿದ ವಂಚನೆ ಎಂದು ಪ್ರತಿಪಕ್ಷಗಳು ಮಾತ್ರವಲ್ಲದೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೂಡ ಗಂಭೀರ ಆರೋಪ ಮಾಡಿದ್ದಾರೆ. ತನ್ನ ರಾಜಕೀಯ ವಿರೋಧಿಗಳು, ಸಾಮಾಜಿಕ ಕಾರ್ಯಕರ್ತರು, ನ್ಯಾಯಮೂರ್ತಿಗಳು, ಪತ್ರಕರ್ತರು ಮಾತ್ರವಲ್ಲ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಗೂಢಚಾರಿಕೆ ನಡೆಸಲು, ದೂರವಾಣಿ ಕದ್ದಾಲಿಕೆ ಮಾಡಲು ಇಸ್ರೇಲ್‌ನಿಂದ ಪೆಗಾಸಸ್ ಕುತಂತ್ರಾಂಶವನ್ನು ಖರೀದಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲದಿಲ್ಲ.
ಈ ಹಿಂದೆ ಈ ಬಗ್ಗೆ ಆರೋಪಗಳು ಬಂದಾಗ ಮೋದಿ ಸರಕಾರ ಸಂಸತ್ತಿನಲ್ಲಿ ನೀಡಿರುವ ಹೇಳಿಕೆ ಸತ್ಯಾಂಶದಿಂದ ಕೂಡಿಲ್ಲ ಎಂಬುದು ‘ನ್ಯೂಯಾರ್ಕ್ ಟೈಮ್ಸ್’ ವರದಿಗಳಿಂದ ಸ್ಪಷ್ಟವಾಗುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಯೊಂದು ಸಲ್ಲಿಕೆಯಾದಾಗಲೂ ವಿಚಾರಣೆ ಸಂದರ್ಭದಲ್ಲಿ ಒಕ್ಕೂಟ ಸರಕಾರ ಈ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಲಿಲ್ಲ. ಸರಕಾರ ಕೊಟ್ಟ ಉತ್ತರಗಳು ಸಮಾಧಾನಕರವಾಗಿಲ್ಲ. ಈ ಉತ್ತರಗಳನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ನ್ಯಾಯಾಲಯ ಕೂಡ ಹೇಳಿತ್ತು. ರಾಷ್ಟ್ರೀಯ ಭದ್ರತೆಯ ನೆಪ ಮುಂದೆ ಮಾಡಿ ಮೋದಿ ಸರಕಾರ ಪ್ರತಿ ಬಾರಿ ಇಂತಹ ಸನ್ನಿವೇಶಗಳಲ್ಲಿ ಹಾರಿಕೆಯ, ಜಾರಿಕೆಯ ಉತ್ತರಗಳನ್ನು ನೀಡುತ್ತ ಬಂದಿದೆ. ಸರಕಾರದ ಸ್ಪಷ್ಟೀಕರಣವನ್ನು ಒಪ್ಪಿಕೊಳ್ಳದ ನ್ಯಾಯಾಲಯ ಮೂವರು ಸದಸ್ಯರ ಸಮಿತಿಯನ್ನು ರಚಿಸಿ ಒಕ್ಕೂಟ ಸರಕಾರವು ಪೆಗಾಸಸ್ ಬಳಕೆ ಮಾಡಿಕೊಂಡಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ತಿಳಿಸಿತ್ತು. ಆದರೆ ವರದಿ ಇನ್ನೂ ಬರಬೇಕಾಗಿದೆ.
ಅದೇನೇ ಇರಲಿ ಮೋದಿ ಸರಕಾರ ಭಾರತದ ಜನರ ಮುಂದೆ ವಾಸ್ತವ ಸಂಗತಿಯನ್ನು ಬಹಿರಂಗವಾಗಿ ಹೇಳಬೇಕು. ತಾನು ದೋಷಮುಕ್ತ ಎಂಬುದನ್ನು ಸಾಬೀತು ಪಡಿಸಬೇಕು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಸಾರ್ವಜನಿಕರ ಹಣದಿಂದ ಪೆಗಾಸಸ್ ಕುತಂತ್ರಾಂಶವನ್ನು ಇಸ್ರೇಲಿನಿಂದ ಖರೀದಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸ್ಪಷ್ಟವಾದ ಉತ್ತರ ನೀಡಬೇಕು. ಇಲ್ಲವಾದರೆ ತನ್ನ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಲು ಸರಕಾರ ಈ ಬೇಹುಗಾರಿಕೆ ಕುತಂತ್ರಾಂಶವನ್ನು ಖರೀದಿಸಿದೆ ಎಂಬುದು ನಿಜವಾಗುತ್ತದೆ.
ಸಾಮಾನ್ಯವಾಗಿ ಪೆಗಾಸಸ್‌ನಂತಹ ತಂತ್ರಜ್ಞಾನವನ್ನು ಸೇನಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಗಡಿಯಾಚೆಗಿನ ಶತ್ರುಗಳ ಮೇಲೆ, ಅಪಾಯಕಾರಿ ವ್ಯಕ್ತಿಗಳ ಮೇಲೆ ಕಣ್ಗಾವಲು ಇರಿಸಲು ಇದನ್ನು ಉಪಯೋಗಿಸಲಾಗುತ್ತದೆ. ವ್ಯಕ್ತಿಗಳು ಬಳಸುವ ಸ್ಮಾರ್ಟ್ ಫೋನ್, ಕಂಪ್ಯೂಟರ್ ಮೂಲಕ ಸಂಬಂಧಿಸಿದ ವ್ಯಕ್ತಿಯ ಚಲನವಲನ, ಸಂಭಾಷಣೆಗಳ ಮೇಲೆ ನಿಗಾ ಇಡಲಾಗುತ್ತದೆ. ಇಂತಹ ತಂತ್ರಾಂಶವನ್ನು ದೇಶದ ಪ್ರತಿಪಕ್ಷ ನಾಯಕರ ವಿರುದ್ಧ, ನ್ಯಾಯಾಧೀಶರ ವಿರುದ್ಧ ಮತ್ತು ನಾಗರಿಕರ ವಿರುದ್ಧ ಬಳಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ಸರಕಾರ ಏನನ್ನೂ ಮುಚ್ಚಿಡದೆ ವಾಸ್ತವ ಸಂಗತಿಯನ್ನು ದೇಶದ ಜನರ ಮುಂದೆ ಇಟ್ಟರೆ ಮಾತ್ರ ಸಂದೇಹ ನಿವಾರಣೆಯಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು 2017ರ ಜುಲೈನಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದಾಗ ಮಾಡಿಕೊಳ್ಳಲಾದ ಒಪ್ಪಂದ ಇದಾಗಿದೆ. ಇದೇ ಸಂದರ್ಭದಲ್ಲಿ ಫೆಲೆಸ್ತೀನ್ ಕುರಿತು ಭಾರತದ ನಿಲುವು ಕೂಡ ಬದಲಾಗಿರುವುದನ್ನು ಗಮನಿಸಬಹುದು.
ಅದೇನೇ ಇರಲಿ ಪೆಗಾಸಸ್ ಕುತಂತ್ರಾಂಶವನ್ನು ಬಳಸಿಕೊಂಡು ಅಕ್ರಮವಾದ ಮತ್ತು ಅಸಂವಿಧಾನಿಕವಾದ ಬೇಹುಗಾರಿಕೆಯನ್ನು ಮೋದಿ ಸರಕಾರ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಈ ವಿಷಯದಲ್ಲಿ ಸರಕಾರ ಸಂಸತ್ತು ಮತ್ತು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆದಿದೆ. ತಾನು ತಪ್ಪುಮಾಡಿಲ್ಲವೆಂದಾದರೆ ಸರಕಾರ ಪುರಾವೆ ಸಹಿತ ಸಾಬೀತು ಪಡಿಸಲಿ.







