ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ಹಿಜಾಬ್ ಕೋಮು ಬಣ್ಣ ಪಡೆದಿದೆ : ಅಕ್ಷಿತ್ ಸುವರ್ಣ

ಅಕ್ಷಿತ್ ಸುವರ್ಣ
ಮಂಗಳೂರು : ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಇಂದು ಹಿಜಾಬ್ ವಿಚಾರ ಕೋಮು ಬಣ್ಣವನ್ನು ಪಡೆದು ರಾಜ್ಯ ವ್ಯಾಪಿ ಅಲ್ಲದೆ ದೇಶವ್ಯಾಪಿ ಹರಡಲು ಕಾರಣವಾಗಿದೆ ಎಂದು ದ.ಕ. ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿದ ಅವರು, ಸಮಸ್ಯೆ ಆರಂಭವಾದಾಗಲೇ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳದೆ ಬಿಜೆಪಿ ಸರಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದ್ದರಿಂದ ಇಂದು ಕೈ ಮೀರಿ ಹೋಗಿದೆ. ಇವರ ನಿರ್ಲಕ್ಷ್ಯ ಭಾವನೆಯಿಂದಾಗಿ ಮುಗ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡಿರುವುದು ನಾಚೀಕೆಗೇಡು ಎಂದು ಅವರು ಹೇಳಿದ್ದಾರೆ.
ಹಿಜಾಬ್ ವಿಚಾರ ಉಡುಪಿ ಜಿಲ್ಲೆಯ ಒಂದು ಸರಕಾರಿ ಕಾಲೇಜಿನಲ್ಲಿ ಸಮಸ್ಯೆಯಾದಾಗ ಆಗಲೇ ಅಲ್ಲಿನ ಸ್ಥಳೀಯ ಶಾಸಕರು ಹಾಗೂ ಆಡಳಿತ ಮಂಡಳಿ ಸರಕಾರದ ಜೊತೆಗೆ ಸೇರಿಕೊಂಡು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕಿತ್ತು. ಬಿಜೆಪಿ ಸರಕಾರಕ್ಕೆ ಇದೊಂದು ಚುನಾವಣಾ ವಿಚಾರವಾಗಿ ಮುಂದುವರಿಸುವ ಆಸೆ ಇದ್ದ ಪರಿಣಾಮ ಸಮಸ್ಯೆ ದೊಡ್ಡದಾಗಲು ಅವಕಾಶ ಮಾಡಿಕೊಟ್ಟಿದೆ. ಇದಲ್ಲದೆ ಇತ್ತೀಚೆಗೆ ನಾರಾಯಣ ಗುರುಗಳ ಟ್ಯಾಬ್ಲೋ ವಿಚಾರದಿಂದ ಮುಖಭಂಗ ಅನುಭವಿಸಿದ ಬಿಜೆಪಿ ಸರಕಾರಕ್ಕೆ ಆ ವಿಷಯವನ್ನು ಮರೆಮಾಚುವ ಅಗತ್ಯದಿಂದ ಹಿಜಾಬ್ ವಿಚಾರವನ್ನು ಮುನ್ನಲೆಗೆ ತಂದಿದೆ. ತಮ್ಮ ಸರಕಾರದ ಹುಳುಕನ್ನು ಮುಚ್ಚಲು ಬಿಜೆಪಿ ಸರಕಾರಕ್ಕೆ ಒಳ್ಳೆಯ ವಿಚಾರ ಸಿಕ್ಕಿದ್ದು ಈ ಮೂಲಕ ಇಡೀ ರಾಜ್ಯಕ್ಕೆ ಹಿಜಾಬ್ ಮತ್ತು ಕೇಸರಿ ವಿವಾದ ಬೆಂಕಿ ಹಚ್ಚಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದು ಈ ವಿಚಾರ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾನಗರಿ ಎಂದು ಕರೆಯುತ್ತಿರುವ ಉಡುಪಿ ಜಿಲ್ಲೆಯ ಮಾನವನ್ನು ಹರಾಜು ಹಾಕುವ ಕೆಲಸ ಸರಕಾರ ನಡೆಸಿದೆ ಎಂದರೆ ತಪ್ಪಾಗಲಾರದು.
ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಕೇಂದ್ರ ಸರಕಾರ ಆರಂಭಿಸಿದ ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ. ಕುಂದಾಪುರದಲ್ಲಿ ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟಿನ ಒಳಗೂ ಬರಲು ಅವಕಾಶ ನೀಡದೆ ಬಿಸಿಲಿಗೆ ರಸ್ತೆಯಲ್ಲಿ ಕುಳಿತುಕೊಳಿಸಿರುವುದು ಬಿಜೆಪಿಯವರಿಗೆ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಕಾಳಜಿ ಏನು ಎನ್ನುವುದು ಎದ್ದು ತೋರುತ್ತದೆ. ಕೋವಿಡ್ ಕಾಲದಲ್ಲಿ ಶಾಲೆಗಳು ಸರಿಯಾಗಿ ನಡೆದಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒದ್ದಾಡುತ್ತಿದ್ದಾರೆ. ಇಂಥ ಸಮಯದಲ್ಲಿ ಹಿಜಾಬ್ ವಿವಾದ ಅನಗತ್ಯ ಸೃಷ್ಟಿ ಮಾಡಲಾಗಿದೆ.
ಶಾಂತಿಗೆ ಮತ್ತು ಪ್ರಗತಿಗೆ ಹೆಸರಾದ ರಾಜ್ಯದಲ್ಲಿ ಸಾಮರಸ್ಯ ನೆಲೆಸಬೇಕು ಎನ್ನುವ ಮನಸ್ಸು ಆಳುವ ಸರಕಾರಕ್ಕೆ ಹಾಗೂ ನಾಯಕರಿಗೆ ನಿಜವಾಗಿ ಇದ್ದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳ ವಿಷಯವನ್ನು ಕೂಡಲೇ ನಿಲ್ಲಿಸಬೇಕು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎರಡು ಸಮುದಾಯದ ಸಂಘಟನೆಗಳನ್ನು ಕಾಲೇಜು ಆವರಣಕ್ಕೆ ಬರದಂತೆ ತಡೆಯುವ ಕೆಲಸ ಜಿಲ್ಲಾಡಳಿತದಿಂದ ನಡೆಯಬೇಕಾಗಿದೆ. ಅನಗತ್ಯ ಕೋಮು ಭಾವನೆ ಕೆರಳಿಸುವ ಕೆಲಸವನ್ನು ಮಾಡುವ ಸಂಘಟನೆಗಳಿಗೆ ಜಿಲ್ಲಾಡಳಿತ ಕೂಡಲೇ ಎಚ್ಚರಿಕೆ ನೀಡಬೇಕು. ಮುಗ್ದ ವಿದ್ಯಾರ್ಥಿಗಳು ಎಲ್ಲರೂ ಒಟ್ಟಾಗಿ ಸೇರಿ ಶಿಕ್ಷಣದ ಮೂಲಕ ತಮ್ಮ ಭವಿಷ್ಯ ಕಾಣುವ ಸಂದರ್ಭದಲ್ಲಿ ಶಿಕ್ಷಣದಲ್ಲಿ ವಿಷ ತುಂಬುವುದು ಬೇಡ. ಬಿಜೆಪಿ ಸರಕಾರ ಇಂಥ ಸೂಕ್ಷ್ಮ ವಿಷಯ ಇನ್ನಷ್ಟು ಬೆಳೆಯಲು ಅವಕಾಶ ನೀಡದೇ ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು ಎಂದು ಅಕ್ಷಿತ್ ಸುವರ್ಣ ತಿಳಿಸಿದ್ದಾರೆ.