ಉಡುಪಿ ಜಿಲ್ಲೆ : ಕೋವಿಡ್ ಗೆ ಇಬ್ಬರು ಬಲಿ, 64 ಮಂದಿಯಲ್ಲಿ ಕೊರೋನ ಸೋಂಕು

ಉಡುಪಿ, ಫೆ.8: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್‌ಗೆ ಇಬ್ಬರು ಬಲಿಯಾದರೆ, ಹೊಸದಾಗಿ 64 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಇಂದು 27 ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ, ಸೋಂಕು ಸಕ್ರಿಯರಾಗಿ ರುವವರ ಸಂಖ್ಯೆ 1799ರಲ್ಲಿದೆ.
ಜಿಲ್ಲೆಯಲ್ಲಿ ಇಂದು ಕುಂದಾಪುರದ 79 ಹಾಗೂ ಉಡುಪಿಯ 55 ವರ್ಷ ಪ್ರಾಯದ ಪುರುಷರು ಮೃತಪಟ್ಟಿದ್ದಾರೆ. ಹೃದಯ ಕಾಯಿಲೆ, ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದು, ಕೋವಿಡ್ ರೋಗ ಲಕ್ಷಣ ಕಂಡುಬಂದ ಉಡುಪಿಯ ಪುರುಷರನ್ನು ನಿನ್ನೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಂದು ಮೃತಪಟ್ಟರು. ಕುಂದಾಪುರದ ವೃದ್ಧರು ಕೋವಿಡ್‌ನಿಂದ ಫೆ.3ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ 6ರಂದು ಸಾವನ್ನಪ್ಪಿದರು. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 530ಕ್ಕೇರಿದೆ.
ಇಂದು ಪಾಸಿಟಿವ್ ಬಂದ 64 ಮಂದಿಯಲ್ಲಿ ತಲಾ 32 ಮಂದಿ ಪುರುಷರು ಹಾಗೂ ಮಹಿಳೆಯರು. ಇವರಲ್ಲಿ 40 ಮಂದಿ ಉಡುಪಿ ತಾಲೂಕಿಗೆ, 14 ಮಂದಿ ಕುಂದಾಪುರ ಹಾಗೂ 7 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದ ಮೂವರು ಹೊರಜಿಲ್ಲೆ ಯವರು. ಪಾಸಿಟಿವ್ ಬಂದವರಲ್ಲಿ 48 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 84ಕ್ಕಿಳಿದಿದೆ.
ಸೋಮವಾರ 27 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 15974ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1275 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 17,664ಕ್ಕೇರಿದೆ.
2147 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 2147 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 589ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 524 ಮಂದಿ ಮೊದಲ ಡೋಸ್ ಹಾಗೂ 1034 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ 34 ಮಂದಿ ಮೊದಲ ಡೋಸ್ ಹಾಗೂ 369 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.