ಕೇಸರಿ ಶಾಲು, ಪೇಟ ಧರಿಸಿ ಘೋಷಣೆ: ಉಡುಪಿ ಎಂಜಿಎಂ ಕಾಲೇಜ್ ಕ್ಯಾಂಪಸ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ
ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ: ನ್ಯಾಯಕ್ಕಾಗಿ ಘೋಷಣೆ
ಉಡುಪಿ, ಫೆ.8: ಉಡುಪಿಯಲ್ಲಿ ಮಂಗಳವಾರ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕ್ಕೇರಿದ್ದು, ಹಿಜಾಬ್ ವಿರೋಧಿಸಿ ಕೇಸರಿ ಶಾಲು ಹಾಗೂ ಪೇಟ ಧರಿಸಿಕೊಂಡು ಬಂದ ಉಡುಪಿ ಎಂಜಿಎಂ ಕಾಲೇಜಿನ ಕೆಲವು ವಿದ್ಯಾರ್ಥಿ ಗಳು ಆವರಣದಲ್ಲಿ ಜೈಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಇವರಿಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮುಖಾಮುಖಿಯಾಗಿದರು. ಇದರಿಂದ ಕ್ಯಾಂಪಸ್ ಒಳಗಡೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಸೋಮವಾರ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು, ಸರಕಾರದ ಆದೇಶದ ಬಗ್ಗೆ ಮಾಹಿತಿ ನೀಡಿ, ನಾಳೆಯಿಂದ ಹಿಜಾಬ್ ಧರಿಸಿ ಬರುವವರಿಗೆ ತರಗತಿಗೆ ಪ್ರವೇಶ ಕಲ್ಪಿಸುವುದಿಲ್ಲ ಎಂದು ಸೂಚನೆ ನೀಡಿದ್ದರು. ಆದರೂ ಇಂದು ಬೆಳಗ್ಗೆ 9ಗಂಟೆಗೆ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದರು.
ಗೇಟಿನೊಳಗೆ ಪ್ರವೇಶ ನಿರ್ಬಂಧ
ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹೋಗಿರುವುದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟ ಧರಿಸಿಕೊಂಡು ಕಾಲೇಜಿನ ಗೇಟಿನ ಬಳಿ ಆಗಮಿಸಿದರು. ಆದರೆ ಕೇಸರಿ ಶಾಲು ಹಾಕಿದ ಕಾರಣಕ್ಕೆ ಅವರಿಗೆ ಗೇಟಿನ ಒಳಗೆ ಪ್ರವೇಶ ನಿರ್ಬಂಧಿಸಲಾಯಿತು. ಅದೇ ವೇಳೆ ಐದಾರು ಮುಸ್ಲಿಮ್ ವಿದ್ಯಾರ್ಥಿನಿಯರು ಕೂಡ ಕಾಲೇಜಿಗೆ ಬಂದರು. ಅವರಿಗೂ ಗೇಟಿನೊಳಗೆ ಪ್ರವೇಶ ಕಲ್ಪಿಸಲಿಲ್ಲ. ಬಳಿಕ ಗೇಟಿಗೆ ಬೀಗ ಹಾಕಲಾಯಿತು. ಹೀಗೆ ಇರಿಬ್ಬರು ಗೇಟಿನ ಬಳಿ ಜಮಾಯಿಸಿದರು.
ತರಗತಿಗೆ ಪ್ರವೇಶ ನಿರಾಕರಣೆ
ವಿವಾದದ ಹಿನ್ನೆಲೆಯಲ್ಲಿ ಎಂಜಿಎಂ ಪದವಿ ಪೂರ್ವ ಕಾಲೇಜಿಗೆ ನಿನ್ನೆಯೇ ಮಂಗಳವಾರ ರಜೆ ಘೋಷಿಸಲಾಗಿತ್ತು. ಆದರೆ ಲ್ಯಾಬ್ ಪ್ರಾಕ್ಟಿಕಲ್ ಪರೀಕ್ಷೆ ಇರುವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ರಜೆ ಇರಲಿಲ್ಲ. ಅದರಂತೆ ಬೆಳಗ್ಗೆ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಆದರೆ ಹಿಜಾಬ್ ಧರಿಸಿದ ಕಾರಣಕ್ಕೆ ಲ್ಯಾಬ್ ನಲ್ಲಿದ್ದ ಕೆಲವು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಲಾಯಿತು ಮತ್ತು ಉಳಿದವರಿಗೆ ತರಗತಿ ಒಳಗೆ ಪ್ರವೇಶ ನಿರಾಕರಿಸಲಾಯಿತು.
ವಿದ್ಯಾರ್ಥಿಗಳ ಮುಖಾಮುಖಿ ಪರೀಕ್ಷೆ ಹಾಗೂ ತರಗತಿಗೆ ಪ್ರವೇಶ ಸಿಗದ ಎಲ್ಲ ವಿದ್ಯಾರ್ಥಿನಿಯರು ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗುತ್ತ ಕಾಲೇಜಿನ ಗೇಟಿನ ಕಡೆ ಬಂದರು. ಇದಕ್ಕೆ ವಿರುದ್ಧವಾಗಿ ಕೆಲವು ವಿದ್ಯಾರ್ಥಿಗಳು ತಮ್ಮ ಬ್ಯಾಗಿನಲ್ಲಿ ತಂದಿದ್ದ ಕೇಸರಿ ಶಾಲುಗಳನ್ನು ತೆಗೆದು ಧರಿಸಿ ಜೈಶ್ರೀರಾಮ್ ಘೋಷಣೆಗಳನ್ನು ಕೂಗಿದರು.
ಅಲ್ಲದೆ ಗೇಟಿನ ಹೊರಗಡೆ ಇದ್ದ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಕೂಡ ಕಂಪೌಂಡು ಹಾರಿಕೊಂಡು ಕಾಲೇಜಿನ ಕ್ಯಾಂಪಸ್ ಒಳಗೆ ಹೋದರು. ಹೀಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಹಾಗೂ ಕೇಸರಿ ಧರಿಸಿದ ವಿದ್ಯಾರ್ಥಿಗಳು ಮುಖಾಮುಖಿಯಾದರು. ಈ ವೇಳೆ ವಿದ್ಯಾರ್ಥಿನಿಯರು ನ್ಯಾಯ ಬೇಕು ಘೋಷಣೆಗಳನ್ನು ಕೂಗಿದರೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿ ಗಳು ಜೈಶ್ರೀರಾಮ್, ವಂದೇ ಮಾರಂ ಘೋಷಣೆಗಳನ್ನು ಕೂಗಿದರು.
ಬಿಗುವಿನ ವಾತಾವರಣ
ಇದರಿಂದ ಕಾಲೇಜಿನ ಆವರಣದೊಳಗೆ ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಬಳಿಕ ಆಗಮಿಸಿದ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕಾ ಎರಡು ಕಡೆಯವವರಿಗೆ ಗೇಟಿನಿಂದ ಹೊರಹೋಗುವಂತೆ ಸೂಚಿಸಿದರು. ಆದರೆ ಪಟ್ಟು ಹಿಡಿದ ವಿದ್ಯಾರ್ಥಿಗಳು ಹೊರಗೆ ಹೋಗಲು ನಿರಾಕರಿಸಿದರು.
ಬಳಿಕ ಉಪನ್ಯಾಸಕರು, ಪೊಲೀಸರು ಕೂಡ ಮಕ್ಕಳಲ್ಲಿ ಹೊರ ನಡೆಯು ವಂತೆ ಮನವಿ ಮಾಡಿದರು. ಅವರು ಹೋಗುವವರೆಗೆ ಇವರು, ಇವರು ಹೋಗುವವರೆಗೆ ಅವರು ಹೋಗುವುದಿಲ್ಲ ಎಂದು ಕ್ಯಾಂಪಸ್ ಒಳಗೆಯೇ ನಿಂತರು.
ಬಳಿಕ ಕಟ್ಟುನಿಟ್ಟಿನ ಸೂಚನೆ ನೀಡಿ ಎಲ್ಲ ವಿದ್ಯಾರ್ಥಿಗಳನ್ನು ಗೇಟಿನಿಂದ ಹೊರಗಡೆ ಕಳುಹಿಸಲಾಯಿತು. ತದನಂತರ ಎರಡು ಕಡೆಗಳ ವಿದ್ಯಾರ್ಥಿಗಳು ಗೇಟಿನ ಹೊರಗಡೆ ಸುಮಾರು ಹೊತ್ತು ಜಮಾಯಿಸಿದರು. ಆದರೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಿದ್ದರು. ವಿದ್ಯಾರ್ಥಿ ಗಳಿಗೆ ಬೆಂಬಲವಾಗಿ ಸ್ಥಳಕ್ಕೆ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಹಾಗೂ ಇತರ ಸಂಘಪರಿವಾರದ ಮುಖಂಡರು ಆಗಮಿಸಿದರು.
ಸ್ಥಳದಲ್ಲಿ ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕಿ, ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಹಾಜರಿದ್ದರು. ಕಾಲೇಜು ಆವರಣದೊಳಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮುಂದಿನ ನಿರ್ಧಾರದವರೆಗೆ ರಜೆ ಘೋಷಣೆ
ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕ್ಕೇರಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮುಂದೆ ನಿರ್ಧಾರ ತೆಗೆದುಕೊಳ್ಳುವರೆಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು.
ಗೇಟಿನ ಹೊರಗಡೆ ನಿಂತಿದ್ದ ಎರಡು ಕಡೆಯ ವಿದ್ಯಾರ್ಥಿ ಸಮೂಹದ ಬಳಿ ಬಂದ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕಾ, ಕಾಲೇಜಿಗೆ ರಜೆ ನೀಡಿದ್ದು ಎಲ್ಲರೂ ಮನೆಗೆ ಹೋಗುವಂತೆ ತಿಳಿಸಿದರು. ಅದರಂತೆ ಮಕ್ಕಳು ಅಲ್ಲಿಂದ ಮನೆಗಳಿಗೆ ತೆರಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಾಂಶುಪಾಲರು, ನಮ್ಮ ಕಾಲೇಜಿಗೆ ರಜೆ ನೀಡಿ ಬಂದ್ ಮಾಡಿದ್ದೇವೆ. ನಮ್ಮ ಕಾಲೇಜ ಆವರಣ ಒಂದು ಆರೋಗ್ಯಕರವಾದ ಕ್ಯಾಂಪಸ್. ಇಲ್ಲಿ ಅಂತಹ ಸಮಸ್ಯೆ ಆಗುವುದಿಲ್ಲ. ಒಂದು ವಿವಾದ ಇಲ್ಲಿಗೆ ಅಂತ್ಯವಾಗುತ್ತದೆ. ಮುಂದೆ ಆಡಳಿತ ಮಂಡಳಿ ಸೂಕ್ತವಾದ ತೀರ್ಮಾನ ತೆಗೆದು ಕೊಂಡ ಬಳಿಕ ಕಾಲೇಜು ಪುನಾರಂಭ ಮಾಡಲಾಗುವುದು ಎಂದು ಹೇಳಿದರು.
ಪೇಟ ಹಂಚಿಕೆ ವಿಡಿಯೋ ವೈರಲ್!
ಉಡುಪಿ ಎಂಜಿಎಂ ಕಾಲೇಜಿಗೆ ಕೇಸರಿ ಪೇಟ ಧರಿಸಿ ಆಗಮಿಸಿದ ವಿದ್ಯಾರ್ಥಿ ಗಳಿಗೆ ಕೆಲವು ಸಂಘಟನೆಯವರು ಪೇಟ ಹಂಚಿಕೆ ಮಾಡಿರುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಂಜಿಎಂ ಕಾಲೇಜಿನ ಎದುರಿನ ಬಸ್ ನಿಲ್ದಾಣದಲ್ಲಿ ಸಂಘಟನೆಯವರು ನೀಡಿದ ಪೇಟ ಹಾಗೂ ಕೇಸರಿ ಶಾಲನ್ನು ಧರಿಸಿಕೊಂಡು ಬಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮುಗಿದ ಬಳಿಕ ಆ ಪೇಟಗಳನ್ನು ಅಲ್ಲೇ ಒಟ್ಟು ಮಾಡಿ ತೆಗೆದುಕೊಂಡು ಹೋಗುವ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ. ಈ ಪೇಟಗಳು ಇತ್ತೀಚೆಗೆ ಆಯುಧ ಪೂಜೆ ಸಂದರ್ಭದಲ್ಲಿ ಉಡುಪಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಳಸಿದವು ಎಂದು ತಿಳಿದು ಬಂದಿದೆ.
ಸವಾಲು ಹಾಕಿದ ವಿದ್ಯಾರ್ಥಿನಿ!
‘ನಾವು ಹಲವು ವರ್ಷಗಳಿಂದ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವೆ. ನಾವು ಇವತ್ತು ಹಾಕಿಕೊಂಡು ಬಂದಿರುವುದಲ್ಲ’ ಎಂದು ವಿದ್ಯಾರ್ಥಿನಿಯೊಬ್ಬಳು ಮಾಧ್ಯಮದವರಿಗೆ ಉತ್ತರಿಸಿದರು. ಆಗ ಮಾಧ್ಯಮದವರು ಅಲ್ಲೇ ಇದ್ದ ಕೇಸರಿ ಧರಿಸಿದ ವಿದ್ಯಾರ್ಥಿಯಲ್ಲಿ ಇವರು ಹಲವು ವರ್ಷಗಳಿಂದ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಆಗ ವಿದ್ಯಾರ್ಥಿನಿ ಆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಯನ್ನುದ್ದೇಶಿಸಿ ‘ಹೇಳಿ ಈಗ ನೀವು ಹೇಳಿ.. ನಿಮಗೆ ಕೇಸರಿ ಶಾಲು ಈಗ ನೆನಪಾಗಿರುವುದ? ಒಂದು ಹುಡುಗಿಯೊಂದಿಗೆ ಇಷ್ಟು ಮಂದಿ ಮಾತನಾಡುತ್ತೀರಲ್ಲ. ಆಗುವುದಾದರೆ ಒಬ್ಬ ಎದುರಿಗೆ ಬಂದು ಮಾತನಾಡಿ’ ಎಂದು ಸವಾಲು ಹಾಕಿದರು.
ಹಿಜಾಬ್‌ಗೆ ಬೆಂಬಲ ನೀಡಿದ ಸಹಪಾಠಿಗಳು
ವಿವಾದದ ಮಧ್ಯೆ ಹಿಜಾಬ್ ಧರಿಸಿಕೊಂಡು ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಅವರ ಸಹಪಾಠಿಗಳಾದ ಇತರ ವಿದ್ಯಾರ್ಥಿನಿಯರು ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬರು, ನಾನು ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುವುದಕ್ಕೆ ಬೆಂಬಲ ನೀಡುತ್ತೇನೆ. ಯಾಕೆಂದರೆ ಅವರು ನಿನ್ನೆ ಮೊನ್ನೆಯಿಂದಲ್ಲ, ಮೊದಲಿನಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಅದು ಅವರಿಗೆ ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕು. ಆದರೆ ಇವರು ಈಗ ಯಾಕೆ ವಿರೋಧ ಮಾಡುತ್ತಿದ್ದಾರೆಂದು ಗೊತ್ತಾಗು ತ್ತಿಲ್ಲ’ ಎಂದು ತಿಳಿಸಿದರು.
''ಸಂವಿಧಾನದ ನಮ್ಮ ಧಾರ್ಮಿಕ ಹಕ್ಕು ನೀಡಿದೆ. ಹಾಗಾಗಿ ನಮಗೆ ಹಿಜಾಬ್ ಕೂಡ ಬೇಕು, ಶಿಕ್ಷಣ ಕೂಡ ಬೇಕು. ನಮಗೆ ಹಿಜಾಬ್ ಹಾಕುವುದು ಕಡ್ಡಾಯ. ಅವರು ಕೇಸರಿ ಶಾಲು ಹಾಕಿದರೆ ನಮಗೆ ಯಾವುದೇ ತೊಂದರೆ ಇಲ್ಲ. ನಮ್ಮದು ತುಂಬಾ ಹೆಸರು ಪಡೆದ ಕಾಲೇಜು. ಅದಕ್ಕಾಗಿಯೇ ನಾವು ಇಲ್ಲಿ ಬಂದು ಸೇರಿದ್ದು. ಇಂದು ಕೂಡ ಅಂತಿಮ ಕೆಮೆಸ್ಟ್ರಿ ಲ್ಯಾಬ್ ಪರೀಕ್ಷೆ ನಡೆದಿದೆ. ಆದರೆ ನಮಗೆ ಪ್ರವೇಶ ಕೊಡುತ್ತಿಲ್ಲ. ನಾವು ವೈದ್ಯೆ ಆಗಬೇಕೆಂದು ಇದ್ದೇನೆ. ಆದರೆ ಈ ರೀತಿ ವಿವಾದ ಮಾಡಿ ನಮ್ಮನ್ನು ಶಿಕ್ಷಣದಿಂದ ವಂಚಿತ ರನ್ನಾಗಿಸುವ ಹುನ್ನಾರ ನಡೆಸಲಾಗುತ್ತಿದೆ''
-ವಿದ್ಯಾರ್ಥಿನಿ
''ಪ್ರಾಂಶುಪಾಲರು ಸ್ಕಾರ್ಫ್ ಹಾಕಿಕೊಂಡು ಬಂದರೆ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ ನಿಯಮದಂತೆ ನಾವು ತರಗತಿಗೆ ಹೋಗಿಲ್ಲ. ಆದರೆ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಘೋಷಣೆಗಳನ್ನು ಕೂಗುತ್ತ ಬಂದು ವಿವಾದ ಸೃಷ್ಠಿಸಿದರು. ಈ ಎಲ್ಲ ವಿಚಾರವನ್ನು ನೋಡುವಾಗ ನಮಗೆ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ ಎಂದು ಅನಿಸುತ್ತದೆ. ಮೂರು ವರ್ಷದಿಂದ ನಾನು ಹಿಜಾಬ್ ಹಾಕಿಕೊಂಡು ಬರುತ್ತಿದ್ದೇನೆ''
-ಜವೇರಿಯಾ, ಬಿಎಸ್ಸಿ ಅಂತಿಮ ವರ್ಷ ವಿದ್ಯಾರ್ಥಿನಿ
‘ನಮ್ಮ ಮಕ್ಕಳು ನಿನ್ನೆಯವರೆಗೂ ಹಿಜಾಬ್ ಹಾಕಿಕೊಂಡು ಬಂದಿದ್ದರು. ಈವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ಏಕಾಏಕಿ ವಿವಾದ ಸೃಷ್ಠಿಸಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಸಿಖ್ ಸಮುದಾಯದವರಿಗೆ ತಲೆ ಬಟ್ಟೆ ಹಾಕಲು ಅವಕಾಶ ಇರುವಾಗ ನಮ್ಮ ಮಕ್ಕಳಿಗೆ ಯಾಕೆ ನೀಡುತ್ತಿಲ್ಲ’
-ಮುಹ್ಮಮದಾಲಿ, ಪೋಷಕರು