ಶಾಲಾ ಕಾಲೇಜುಗಳಿಗೆ ರಜೆ ಇದ್ದರೂ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಬೆಂಗಳೂರು, ಫೆ.8: ರಾಜ್ಯದ ನಾನಾ ಭಾಗಗಳ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಇದೇ 9ರಿಂದ 11ವರೆಗೆ ರಜೆ ಘೋಷಿಸಲಾಗಿದೆ. ಆದರೆ, ಈಗಾಗಲೇ ನಡೆಯುತ್ತಿರುವ ಎಂಜಿನಿಯರಿಂಗ್, ಸ್ನಾತಕೋತ್ತರ ಮತ್ತಿತರ ಪರೀಕ್ಷೆಗಳು ಎಂದಿನಂತೆ ನಡೆಯುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳಿಗೂ ರಜೆ ಆದೇಶ ಅನ್ವಯವಾಗಲಿದೆ. ಡಿಪ್ಲೊಮಾ ತರಗತಿಗಳು ಕೂಡ ಇರುವುದಿಲ್ಲ. ಹಿಜಾಬ್ ವಿವಾದ ಸದ್ಯಕ್ಕೆ ನ್ಯಾಯಾಲಯದ ಮುಂದಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶಾಂತಿಯುತವಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು.
ಕಾಲೇಜುಗಳಲ್ಲಿ ಹಿಜಾಬ್ ಗಾಗಲಿ, ಕೇಸರಿ ಶಾಲುವಿಗಾಗಲಿ ಅವಕಾಶವಿಲ್ಲ. ಆದರೆ ಎರಡೂ ಕಡೆಯವರು ಹಠ ಹಿಡಿದಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಅಂತಿಮವಾಗಿ ಎಲ್ಲರೂ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಯಾರೂ ಕಾನೂನನ್ನು ಕೈಗೆತ್ತಿ ಕೊಳ್ಳಬಾರದು. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಅಶ್ವತ್ಥ ನಾರಾಯಣ ಮನವಿ ಮಾಡಿದರು.





