ಕಾನೂನು ಸುವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ, ಹೈಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಫೆ.8: ಯಾವುದೇ ಕಾರಣಕ್ಕೂ ಕಾನೂನು ಸುವ್ಯಸ್ಥೆ ಹಾಳಾಗಬಾರದು, ವಿದ್ಯಾರ್ಥಿಗಳ ಮನದಲ್ಲಿ ಮತೀಯತೆ ಮೂಡುವುದು ಸರಿಯಲ್ಲ ವಿದ್ಯಾರ್ಥಿಗಳು, ಪೋಷಕರು ಶಾಂತಿಯುತವಾಗಿರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕುರಿತು ಮಂಗಳವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಮೂರೂ ಇಲಾಖೆಗಳ ಹಿರಿಯ ಅಧಿಕಾರಿಗಳೂ ಭಾಗವಹಿಸಿದ್ದರು.
ಸಭೆಯ ಬಳಿಕ ಮಾತನಾಡಿದ ಗೃಹ ಸಚಿವರು, ಎರಡ್ಮೂರು ದಿನಗಳಿಂದ ನಡೆಯುತ್ತಿರುವ ಘಟನೆಗಳ ಕುರಿತು ಚರ್ಚೆ ಮಾಡಿದ್ದೇವೆ. ಕೋರ್ಟ್ ನಲ್ಲಿ ಈ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಪ್ರಾಥಮಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಮಂಗಳವಾರ ದ್ವಿತೀಯ ಪಿಯುಸಿ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 2 ವರ್ಷದಿಂದ ಮಕ್ಕಳು ಶಿಕ್ಷಣದ ಮೇಲೆ ಹೊಡೆತ ಬಿದ್ದಿದೆ. ಮಕ್ಕಳು ತಕ್ಷಣ ಇವೆಲ್ಲವನ್ನೂ ಬಿಟ್ಟು ತರಗತಿಗೆ ಹಾಜರಾಗಬೇಕು. ಈ ವಿವಾದವನ್ನು ಸರಕಾರ ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿದೆ. ಸರಕಾರ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಾವೂ ಸಹ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದೇವೆ ಎಂದರು.
ಫೆ.8ರಂದು ಕೆಲವು ಕಡೆ ಇದ್ದಕ್ಕಿಂತೆ ಪರಿಸ್ಥಿತಿ ಉದ್ವೇಗಕ್ಕೆ ಹೋಗಿದೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಕೆಲವೊಂದು ಕಾಲೇಜುಗಳಲ್ಲಿ ಮಾತ್ರ ಗಲಾಟೆ ನಡೆದಿದೆ. ಪೊಲೀಸರು ಉತ್ತಮವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ನಾವು ನಮ್ಮ ಸುತ್ತೋಲೆಗೆ ಬದ್ಧರಾಗಿದ್ದೇವೆ. ಹೈಕೋರ್ಟ್ ಏನು ತೀರ್ಪು ನೀಡುತ್ತದೆ ನೋಡೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
9 ಮತ್ತು 10 ನೆ ತರಗತಿ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.
ರಾಜ್ಯ ಸರಕಾರ ಸಮವಸ್ತ್ರದ ಕುರಿತು ಬಹಳ ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಂಡಿದೆ. ಸರಕಾರದ ಸುತ್ತೋಲೆಯ ಬಳಿಕವೂ ಕೆಲವು ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಹಾಕುವವರು ಪೈಪೋಟಿಗೆ ಬಿದ್ದಿದ್ದರಿಂದ ಈಗಿನ ಪರಿಸ್ಥಿತಿ ಸೃಷ್ಟಿಯಾಗಿದೆ. ಸರಕಾರದ ನಿಲುವನ್ನು ನ್ಯಾಯಾಲಯಕ್ಕೂ ತಿಳಿಸಿದ್ದೇವೆ. ಇಂದು ಕೆಲವೆಡೆ ಅಹಿತಕರ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿದ್ದೇವೆ. ಕಾನೂನು ಪಾಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ಧಾರೆ.







