ಈ ಸಾಲಿನ ಅಭಿವೃದ್ಧಿ ಕಾರ್ಯಗಳ ಅನುದಾನದ ಸಮರ್ಪಕ ಬಳಕೆಗೆ ಉಸ್ತುವಾರಿ ಸಚಿವ ಅಂಗಾರ ಸೂಚನೆ
ಉಡುಪಿ, ಫೆ.8: ಸರಕಾರ ಪ್ರಸುತ್ತ ಸಾಲಿಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಯೋಜನೆಗಳಿಗೆ ಮಂಜೂರು ಮಾಡಿರುವ ಅನುದಾನಗಳನ್ನು ಸಮರ್ಪ ಕವಾಗಿ ಬಳಸಿಕೊಳ್ಳುವುದರೊಂದಿಗೆ ಎಲ್ಲಾ ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಪ್ರತಿಶತ 100ರಷ್ಟು ಪರಿಣಾಮಕಾರಿಯಗಿ ಅನುಷ್ಠಾನ ಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡ ಜಲಸಾರಿಗೆ ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರ ಅನೇಕ ಜನಪರ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಅದಕ್ಕನುಗುಣವಾಗಿ ಅನುದಾನವನ್ನೂ ಸಹ ನೀಡಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನವನ್ನು ಮಾಡುವುದರೊಂದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ ಬೇಕೆಂದು ಸೂಚನೆ ನೀಡಿದರು.
ಸರಕಾರದ ಯೋಜನೆಗಳನ್ನು ಕಾರ್ಯ ಸಾಧನೆ ಮಾಡುವ ಸಂದಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಜಿಲ್ಲಾಡಳಿತ ಅಥವಾ ನಮ್ಮ ಗಮನಕ್ಕೆ ತಂದರೆ, ಅದನ್ನು ಶೀಘ್ರದಲ್ಲಿಯೇ ಪರಿಹರಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಸಮಗ್ರ ಗಿರಿಜನ ಯೋಜನೆಯಡಿಯಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ನೀಡಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ವ್ಯವಸ್ಥಿತವಾದ ಭವನ ನಿರ್ಮಾಣ ಮಾಡಬೇಕು. ಅವುಗಳನ್ನು ಸ್ಥಳೀಯ ಜನರ ಸದ್ಬಳಕೆಗೆ ಅನುಕೂಲಕರವಾಗುವ ಸ್ಥಳಗಳಲ್ಲಿ ನಿರ್ಮಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಅಂಬೇಡ್ಕರ್ ಅಭಿವೃದ್ದಿ ನಿಗಮವೂ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮ ಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕಾಮಗಾರಿಗಳನ್ನು ಕೈಗೊಳ್ಳುವ ಕಾರ್ಯ ವಿಳಂಬವಾಗಿದೆ. ಕೊಳವೆ ಬಾವಿ ಕೊರೆಯುವ ಟೆಂಡರ್ ಕಾಮಗಾರಿಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಕರೆಯುವಂತೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಸರಕಾರದ ಸಹಾಯಧನದೊಂದಿಗೆ ನಿರುದ್ಯೋಗಿಗಳುಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿಸಲು ಅನೇಕ ಯೋಜನೆ ಗಳನ್ನು ಜಾರಿಗೆ ತಂದಿದೆ. ಫಲಾನುಭವಿಗಳನ್ನು ಅಯ್ಕೆ ಮಾಡಿ, ಅರ್ಥಿಕ ನೆರವನ್ನು ಒದಗಿಸಲು ಬ್ಯಾಂಕ್ ಗಳು ಶಿಫಾರಸ್ಸು ಅರ್ಜಿಗಳಿಗೆ ವಿಳಂಬವಿಲ್ಲದೇ ನೆರವನ್ನು ಒದಗಿಸಬೇಕೆಂದು ಲೀಡ್ ಬ್ಯಾಂಕ್ ಮೆನೇಜರ್‌ಗೆ ಸೂಚನೆ ನೀಡಿದರು.
ವಿವಿಧ ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಇಲಾಖಾವಾರು ಸವಿಸ್ತಾರವಾಗಿ ಮಾಹಿತಿ ಪಡೆದ ಸಚಿವರು, ಕಡಿಮೆ ಪ್ರಗತಿ ಸಾಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಪ್ರಗತಿ ಸಾಧಿಸುವುದ ರೊಂದಿಗೆ ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರವಹಿಸಬೇಕು ಎಂದರು.
ಸಾರ್ವಜನಿಕರಿಂದ ಕೈಗಾರಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಭೂಸ್ವಾಧೀನ ಪಡೆಸಿಕೊಂಡ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸದೇ ಇದ್ದಾಗ ಅದನ್ನು ಮರು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸಚಿವರು ಸೂಚನೆ ನೀಡಿದರು.
ನಗರೋತ್ಥಾನದ 4ನೇ ಹಂತದಲ್ಲಿ ಪ್ರತಿ ನಗರಸಭೆಗೆ 40 ಕೋಟಿ, ಪುರಸಭೆಗಳಿಗೆ 10 ಕೋಟಿ ಹಾಗೂ ಪಟ್ಟಣ ಪಂಚಾಯತ್ ಗಳಿಗೆ ತಲಾ 5 ಕೋಟಿ ಅನುದಾನವನ್ನು ನೀಡಲಾಗಿದ್ದು, ನಗರ ಪ್ರದೇಶಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಗಳನ್ನು ರೂಪಿಸಿ ಶೀಘ್ರದಲ್ಲಿಯೇ ಅನುಮೋದನೆ ಪಡೆದು ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ವಾರಾಹಿ ನೀರಾವರಿ ಯೋಜನೆಯಡಿ ಕುಡಿಯುವ ನೀರು ಸೇರಿದಂತೆ ನೀರಾವರಿ ಯೋಜನೆಯಲ್ಲಿ ಈವರೆಗೆ ಶೇ.50ರಷ್ಟು ಪ್ರಗತಿ ಮಾತ್ರ ಸಾಧ್ಯ ವಾಗಿದ್ದು, ಬಾಕಿ ಉಳಿದ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕೆಂದು ಸೂಚನೆ ನೀಡಿರು.
ವಿಧಾನಪರಿಷತ್ ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯವಸ್ಥಿತವಾದ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದ್ದು, ಇದನ್ನು ಆದ್ಯತೆಯ ಮೇಲೆ ಕೈಗೊಳ್ಳುವುದು ಒಳಿತು ಎಂದರು.
ಸರಕಾರ ಬಡ ಜನರಿಗೆ ನೀಡುತ್ತಿರುವ ಪಡಿತರವನ್ನು ಸರ್ಕಾರಿ ನೌಕರರು ಸಹ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂತಹ ದುರುಪಯೋಗ ಪಡೆದುಕೊಂಡವರ ಮೆಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳ ಬೇಕೆಂದು ಸಚಿವರ ಗಮನಕ್ಕೆ ತಂದರು.
ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಮೀನುಗಾರರು ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ಮತ್ಯಾಶ್ರಯ ಯೋಜನೆಯಡಿ 1.20 ಲಕ್ಷ ಅನುದಾನ ನೀಡಲಾಗುತ್ತಿದೆ. ಆದರೆ ಇದು ಅತ್ಯಂತ ಕಡಿಮೆಯಾಗಿದ್ದು, ಕನಿಷ್ಠ 5 ಲಕ್ಷದವರೆಗೆ ಅನುದಾನ ನೀಡಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ತಿಳಿಸಿದರು. ಕಳೆದ 2 ವರ್ಷಗಳಲ್ಲಿ ಮೀನುಗಾರಿಕೆಗೆ ಅನುಕೂಲ ವಾಗುವ ರಸ್ತೆ ಕಾಮಗಾರಿ ಕೈಗೊಂಡಿಲ್ಲ, ಅಲ್ಲದೇ ಕಡಲ ಕೊರತೆ ಕಾಮಗಾರಿ ಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತಂದರು.
ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರದ ನಿರ್ವಹಣೆ ವ್ಯವಸ್ಥಿತ ರೀತಿಯಲ್ಲಿ ನಡೆಯದ ಕಾರಣ ರೋಗಿಗಳನ್ನು ಪಕ್ಕದ ಜಿಲ್ಲೆಗಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇದೆ. ವೈದ್ಯಕೀಯ ಸಿಬ್ಬಂದಿಗಳ ವೇತನ ಪಾವತಿ ಸೇರಿದಂತೆ ವೈದ್ಯಕೀಯ ಸೇವೆಗಳನ್ನು ಒದಗಿಸಿದ ಬಿಲ್‌ಗಳ ಪಾವತಿ ಬಾಕಿ ಇರುವ ಬಗ್ಗೆ ಸಚಿವರ ಗಮನಕ್ಕೆ ತಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಢಾರಿ ಮಾತನಾಡಿ, ಬಡ ಜನರ ಅನುಕೂಲಕ್ಕಾಗಿ ಸರ್ಕಾರ ಸವಲತ್ತುಗಳನ್ನು ನೀಡುತ್ತಿದೆ. ಇವುಗಳನ್ನು ಅರ್ಹ ವ್ಯಕ್ತಿಗೆ ತಲುಪಿಸುವ ಕಾರ್ಯಗಳನ್ನು ಅಧಿಕಾರಿಗಳು ಚಾಚೂ ತಪ್ಪದೇ ಮಾಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಸಿಇಓ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣು ವರ್ಧನ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.