ಫೆ.11: ಬ್ಯಾರಿ ಅಕಾಡಮಿಯಿಂದ 10 ಕೃತಿಗಳ ಅನಾವರಣ
► ಅಹ್ಮದ್ ನೂರಿ ಜನ್ಮ ಶತಮಾನೋತ್ಸವ ಆಚರಣೆ ► ಟಿ.ಎ. ಆಲಿಯಬ್ಬ ಜೋಕಟ್ಟೆಗೆ ಅಹ್ಮದ್ ನೂರಿ ಪ್ರಶಸ್ತಿ
ಮಂಗಳೂರು, ಫೆ.8: ಬ್ಯಾರಿ ಭಾಷಿಕರ ಕುರಿತು ಮೈಕಾಲ ಎಂಬ ಕೃತಿಯನ್ನು ರಚನೆ ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದ ದಿ. ಅಹ್ಮದ್ ನೂರಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಫೆ.11ರಂದು ಸಂಜೆ 5ಕ್ಕೆ ನಗರದ ಪುರಭವನದ ಅಹ್ಮದ್ ನೂರಿ ವೇದಿಕೆಯಲ್ಲಿ ಆಯೋಜಿಸಿದೆ.
ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್‌ರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕಾಡಮಿಯ ಮಾಜಿ ಸದಸ್ಯ, ಹಿರಿಯ ಸಾಹಿತಿ ಟಿ.ಎ.ಆಲಿಯಬ್ಬ ಜೋಕಟ್ಟೆಗೆ ದಿ. ಅಹ್ಮದ್ ನೂರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 5,000 ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಸರ್ ಎಂ. ವಿಶ್ವೇಶ್ವರಯ್ಯ, ಸರ್ದಾರ್ ವಲ್ಲಭಬಾಯಿ ಪಟೇಲ್, ಹವಾಲ್ದಾರ್ ಅಬ್ದುಲ್ ಹಮೀದ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ವೀರ ರಾಣಿ ಅಬ್ಬಕ್ಕ, ಮೌಲಾನಾ ಅಝಾದ್, ಅಟಲ್ ಬಿಹಾರಿ ವಾಜಪೇಯಿಯ ಕುರಿತು ಬರೆದ 10 ಕೃತಿಗಳನ್ನು ಅನಾವರಣಗೊಳಿಸಲಾಗುವುದು.
ಅಂದು ಸಂಜೆ 3ರಿಂದ 4ರವರೆಗೆ ಬಾತಿಷ್ ಪುತ್ತೂರು ಮತ್ತು ಬಳಗದಿಂದ ಬ್ಯಾರಿ ಸಂಗೀತ ಹಾಗೂ ಹುಸೈನ್ ಕಾಟಿಪಳ್ಳ ಮತ್ತು ತಂಡದಿಂದ ಬ್ಯಾರಿ ಕವ್ವಾಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 4ರಿಂದ 4:30ತನಕ ಅಹ್ಮದ್ ನೂರಿ ಬದುಕು ಮತ್ತು ಬರಹದ ಕುರಿತು ಪತ್ರಕರ್ತ ಹಂಝ ಮಲಾರ್‌ರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಬಜಾಲ್, ಮುಸ್ಲಿಂ ಲೇಖಕರ ಸಂಘದ ಮಾಜಿ ಅಧ್ಯಕ್ಷ ಸಈದ್ ಇಸ್ಮಾಯಿಲ್ ಭಾಗವಹಿಸಲಿದ್ದಾರೆ.
ಸಂಜೆ 4:30ರಿಂದ 5ರವರೆಗೆ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಎಂ. ಅಶೀರುದ್ದೀನ್ ಆಲಿಯಾ, ಸಾರಾ ಅಲಿ ಪರ್ಲಡ್ಕ, ರಶೀದಾ ಉಚ್ಚಿಲ್ ಕವನ ವಾಚಿಸಲಿದ್ದಾರೆ. ಸಂಜೆ 6:30ರಿಂದ 8ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರೆಯಲಿದೆ ಎಂದು ರಿಜಿಸ್ಟ್ರಾರ್ ಪೂರ್ಣಿಮಾ ತಿಳಿಸಿದ್ದಾರೆ.







