ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಡಿಟ್ ವರದಿ ಸಲ್ಲಿಸಲು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಶಶಿಕಲಾ ಜೊಲ್ಲೆ
ಮಂಗಳೂರು, ಫೆ.8: ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳು ಪ್ರತೀ ವರ್ಷ ಆಡಿಟ್ ವರದಿ ಸಲ್ಲಿಸುವುದು ಕಡ್ಡಾಯ. ಆದರೆ ಹಲವು ವರ್ಷಗಳಿಂದ ಕೇಲವೇ ದೇವಸ್ಥಾನಗಳು ಮಾತ್ರ ಆಡಿಟ್ ವರದಿಯನ್ನು ಸಲ್ಲಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಿಟ್ ವರದಿಯನ್ನು 2012-13ನೇ ಸಾಲಿನಿಂದ ನಿಯಮಿತವಾಗಿ ಸರಕಾರಕ್ಕೆ ಸಲ್ಲಿಸಿಲ್ಲ. ನೋಟಿಸ್ ನೀಡಿದ ನಂತರ 3 ವಷರ್ಗಳ ಆಡಿಟ್ ವರದಿಯನ್ನು ಮಾತ್ರ ಸಲ್ಲಿಸಲಾಗಿದೆ. ಬಾಕಿ ಉಳಿದಿರುವ ವರ್ಷಗಳ ಆಡಿಟ್ ವರದಿಯನ್ನು ಮಾರ್ಚ್ 31ರೊಳಗೆ ಸಲ್ಲಿಸುವಂತೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ದೈವ ಸಂಕಲ್ಪಯೋಜನೆಯಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮೂರನೇ ಹಂತದ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲಾಗಿದೆ. ಶೀಘ್ರ ಸಚಿವ ಸಂಪುಟದ ಸಭೆಯ ಮುಂದಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದ ಸಚಿವೆ ಶಶಿಕಲಾ ಜೊಲ್ಲೆ, ಕುಕ್ಕೇ ಸುಬ್ರಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ದಿಯದ ಹಿತದೃಷ್ಟಿಯಿಂದ 300 ಕೋ.ರೂ.ಗಳ ಮೂರನೇ ಹಂತದ ಮಾಸ್ಟರ್ ಪ್ಲಾನ್ನ್ನು ಪ್ರಸ್ತಾವಿಸಲಾಗಿದೆ. ಈ ಪ್ರಾಸ್ತಾವಿತ ಮಾಸ್ಟರ್ ಪ್ಲಾನ್ನ ಬಗ್ಗೆ ಬೆಂಗಳೂರು ಹಾಗೂ ಕುಕ್ಕೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಸಭೆಯಲ್ಲಿ ಸಚಿವ ಎಸ್. ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಕುಕ್ಕೆ ಸುಬ್ರಮಣ್ಯದೇವಸ್ಥಾನದ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಸ್ಥಾನ ಕಾರ್ಯನಿರ್ವಹಕ ಅಧಿಕಾರಿ ಡಾ.ನಿಂಗಯ್ಯ ಉಪಸ್ಥಿತರಿದ್ದರು.







