ಹಿಜಾಬ್ ವಿಚಾರದಲ್ಲಿನ ಸಂಘರ್ಷಕ್ಕೆ ಕ್ಯಾಂಪಸ್ ಫ್ರಂಟ್, ಎಸ್‍ಡಿಪಿಐ ಪಾತ್ರದ ಶಂಕೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು, ಫೆ.8: ಹಿಜಾಬ್ ವಿಚಾರದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಎಸ್‍ಡಿಪಿಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೈವಾಡವಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಈ ಸಂಬಂಧ ತನಿಖೆ ನಡೆದರೆ ಎಲ್ಲವೂ ಬಯಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘರ್ಷ ಇಷ್ಟೊಂದು ಮಟ್ಟಿಗೆ ಬೆಳೆಯಲು ಕಾರಣಕರ್ತರು ಯಾರು? ಇದರ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಗಲಾಟೆ, ನಂತರ ಕುಂದಾಪುರದ ಕಾಲೇಜಿಗೆ ವ್ಯಾಪಿಸಿತು. ಇವತ್ತು ಬಾಗಲಕೋಟೆ, ವಿಜಯಪುರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಸಮಸ್ಯೆಯಾಗಿದೆ. ಅನೇಕ ವಿದ್ಯಾರ್ಥಿಗಳು ಕಾಲೇಜಿಗೆ ಸಮವಸ್ತ್ರ ಧರಿಸಿಕೊಂಡು ಬರುತ್ತಿದ್ದಾರೆ. ಆದರೆ, ಕೆಲವು ರಾಜಕೀಯ ನಾಯಕರು ಈ ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡಲು ಬೆಂಕಿಗೆ ತುಪ್ಪು ಸುರಿಯುವ ಕೆಲಸ ಮಾಡಿದ್ದಾರೆ ಎಂದು ಅವರು ಕಿಡಿಗಾರಿದರು.
ತರಗತಿಗಳು ನಡೆಯುತ್ತಿರುವಾಗ ವಿದ್ಯಾರ್ಥಿಗಳು ಕ್ಯಾಂಪಸ್‍ನಲ್ಲಿ ಹಾಗೂ ಹೊರಗಡೆ ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳು ಇಂತಹ ಕೃತ್ಯಗಳಲ್ಲಿ ತೊಡಗದೆ ಸಮವಸ್ತ್ರ ಧರಿಸಿಕೊಂಡು ತರಗತಿಗಳಿಗೆ ಹಾಜರಾಗಬೇಕು ಎಂದು ನಾಗೇಶ್ ಮನವಿ ಮಾಡಿದರು.
ಸರಕಾರ ಹಾಗೂ ನಮ್ಮ ಪಕ್ಷಕ್ಕೆ ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬೇಕಿದ್ದರೆ, ಇದನ್ನು ಒಂದು ತಿಂಗಳ ಮಟ್ಟಿಗೆ ಹಾಗೇ ಕಾಪಾಡಿಕೊಂಡು ಕೂರುತ್ತಿರಲಿಲ್ಲ. ಶಾಂತಿ ಹಾಗೂ ಸೌಹಾರ್ದತೆಯೊಂದಿಗೆ ಈ ಸಮಸ್ಯೆ ಬಗೆಹರಿಸಲು ನಿರಂತರವಾಗಿ ಪ್ರಯತ್ನ ಪಟ್ಟಿದ್ದೇವೆ ಎಂದು ಅವರು ತಿಳಿಸಿದರು.
ಹಿಜಾಬ್ ಹಾಕಿಕೊಂಡೇ ಬರಬೇಕು ಎಂದು ಹೇಳಿದರೆ ಆನ್‍ಲೈನ್ ಶಿಕ್ಷಣ ನೀತಿಯನ್ನು ಅನುಸರಿಸುವಂತೆ ಆ ಕಾಲೇಜಿನ ಎಸ್‍ಡಿಎಂ ಅಧ್ಯಕ್ಷರು ಹೇಳಿದ್ದರು. ಆದರೆ, ಯಾರೊಬ್ಬರೂ ವಿದ್ಯಾರ್ಥಿಗಳನ್ನು ತಾಲಿಬಾನಿಗಳು, ಪಾಕಿಸ್ತಾನಕ್ಕೆ ಹೋಗಿ ಎಂದು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡಬಾರದು ಎಂದು ನಾಗೇಶ್ ಹೇಳಿದರು.
ಶಿವಮೊಗ್ಗದ ಕಾಲೇಜೊಂದರಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ, ಕೇಸರಿ ಧ್ವಜ ಹಾರಿಸಿದ್ದರೆ ಅದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸಾವಿರಾರು ಕಾಲೇಜುಗಳಿವೆ. 10-12 ಕಾಲೇಜುಗಳಲ್ಲಿ ಆಗುತ್ತಿರುವ ಸಮಸ್ಯೆಯಿಂದ ಎಲ್ಲ ಮಕ್ಕಳಿಗೆ ತೊಂದರೆ ನೀಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕಾನೂನು ಪಾಲನೆ ಮಾಡಬೇಕು. ಈಗಾಗಲೆ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ಎಂದಿನಂತೆ ತರಗತಿಗಳಿಗೆ ಹಾಜರಾಗಲಿ ಎಂದು ಅವರು ತಿಳಿಸಿದರು.
ನಮಾಝ್ ಮಾಡಲು ಬೇಡಿಕೆ ಇಟ್ಟಿದ್ದಾರೆ
ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ಹೇಳುವಷ್ಟರ ಮಟ್ಟಿಗೆ ಕೆಲವು ಮಕ್ಕಳು ಮುಂದೆ ಹೋಗಿದ್ದಾರೆ. ಹಿಜಾಬ್ ಧರಿಸಿಕೊಂಡು ಬರುವುದಷ್ಟೇ ಅಲ್ಲ, ಕಾಲೇಜುಗಳಲ್ಲಿ ಐದು ಬಾರಿ ನಮಾಝ್ ಮಾಡುವುದಕ್ಕೂ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ.
-ಬಿ.ಸಿ.ನಾಗೇಶ್ ಶಿಕ್ಷಣ ಸಚಿವ







