ಮಧ್ಯಪ್ರದೇಶ, ಪುದುಚೇರಿಗೂ ಹಬ್ಬಿದ ಸ್ಕಾರ್ಫ್ ವಿವಾದ: ಹಲವೆಡೆಗೆ ಹಿಜಾಬ್ ನಿಷೇಧಕ್ಕೆ ಆಗ್ರಹ

ಸಾಂದರ್ಭಿಕ ಚಿತ್ರ
ಭೋಪಾಲ, ಫೆ. 8: ಸ್ಕಾರ್ಫ್ ವಿವಾದ ಇಂದು ಕರ್ನಾಟಕದ ಗಡಿ ದಾಟಿ ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶ ಹಾಗೂ ಪುದುಚೇರಿಗಳಿಗೆ ಕೂಡ ಹಬ್ಬಿದೆ. ಮಧ್ಯಪ್ರದೇಶದ ಸಚಿವರೋರ್ವರು ‘ಶಿಸ್ತು’ ಹಾಗೂ ‘ಏಕರೂಪದ ವಸ್ತ್ರ ಸಂಹಿತೆ’ಗೆ ಒಲವು ವ್ಯಕ್ತಪಡಿಸಿದ್ದರೆ, ಪುದುಚೇರಿ ಆಡಳಿತ ತರಗತಿಯಲ್ಲಿ ಸ್ಕಾರ್ಫ್ ಧರಿಸುವುದಕ್ಕೆ ಅದ್ಯಾಪಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಅರಿಯಂಕುಪ್ಪಂನ ಸರಕಾರಿ ಶಾಲೆಯ ಮುಖ್ಯಸ್ಥರಿಗೆ ಸೂಚಿಸಿದೆ.
ಹಿಜಾಬ್ ನಿಷೇಧವನ್ನು ಬೆಂಬಲಿಸಿರುವ ಮಧ್ಯಪ್ರದೇಶ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು, ‘‘ಹಿಜಾಬ್ ಶಾಲಾ ಶಿಕ್ಷಣದ ಭಾಗವಲ್ಲ. ಆದುದರಿಂದ ಅದನ್ನು ಶಾಲೆಗಳಲ್ಲಿ ಧರಿಸುವುದನ್ನು ನಿಷೇಧಿಸಬೇಕು. ಜನರು ಸಂಪ್ರದಾಯವನ್ನು ತನ್ನ ಮನೆಗಳಲ್ಲಿ ಅನುಸರಿಸಬೇಕು. ಶಾಲೆಯಲ್ಲಿ ಅಲ್ಲ. ನಾವು ಶಾಲೆಗಳಲ್ಲಿ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಕಾರ್ಯನಿರ್ವಹಿಸುತ್ತಿದ್ದೇವೆ’’ ಎಂದು ಹೇಳಿದ್ದಾರೆ.
ಈ ನಡುವೆ ಪುದುಚೇರಿಯಲ್ಲಿ ಶಿಕ್ಷಣ ನಿರ್ದೇಶನಾಲಯದ ವಕ್ತಾರ, ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಲು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸುತ್ತಿರುವ ಆರೋಪದ ಕುರಿತು ವಿದ್ಯಾರ್ಥಿಗಳ ಗುಂಪುಗಳು ಹಾಗೂ ಇತರ ಸಂಘಟನೆಗಳಿಂದ ದೂರುಗಳನ್ನು ಸ್ವೀಕರಿಸಲಾಗಿದೆ ಎಂದಿದ್ದಾರೆ. ‘‘ನಿಜವಾಗಿ ಏನು ನಡೆಯುತ್ತಿದೆ ಎಂದು ತಿಳಿಯಲು ನಾವು ಬಯಸುತ್ತೇವೆ. ಶಾಲೆಯಿಂದ ವರದಿ ಸ್ವೀಕರಿಸಿದ ಬಳಿಕ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳು್ತೇವೆ’’ ಎಂದು ಅವರು ಹೇಳಿದ್ದಾರೆ.





