ನನ್ನ ಆಡಳಿತದ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರ: ಭಟ್ಕಳ ಪುರಸಭೆ ಅಧ್ಯಕ್ಷ ಫರ್ವೇಝ್ ಕಾಶಿಮ್‌ಜಿ

ಭಟ್ಕಳ, ಫೆ.8: ಕಳೆದ ವರ್ಷ ಅಧಿಕಾರದ ಅವಧಿಯಲ್ಲಿ ಪುರಸಭೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿದ್ದರೂ ಕೆಲವರು ತನ್ನ ಮತ್ತು ಪುರಸಭೆ ಆಡಳಿತದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದು, ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಪುರಸಭೆಯ ಅಧ್ಯಕ್ಷ ಫರ್ವೇಝ್ ಕಾಶಿಮ್‌ಜಿ ಹೇಳಿದರು.
ಮಂಗಳವಾರ ಪುರಸಭೆಯ ತಮ್ಮ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ನಡೆಸಿದ ಎಲ್ಲಾ ಕಾಮಗಾರಿಗಳನ್ನೂ ಸರಕಾರದ ನಿಯಮದಂತೆ ಟೆಂಡರ್ ಕರೆದು ಪಾರದರ್ಶಕವಾಗಿ ಮಾಡಲಾಗಿದೆ. ಸದಸ್ಯರ ವಿಶ್ವಾಸಕ್ಕೆ ತೆಗದುಕೊಂಡೇ ಕಾಮಗಾರಿ ನಡೆಸಲಾಗಿದೆ. ಆದರೂ ಕೆಲವರು ಸಾಮಾನ್ಯ ಸಭೆಯಲ್ಲಿ ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳಿ ಮುಜುಗರ ಆಗುವಂತೆ ಮಾಡಿ ತನ್ನನ್ನು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಇದ್ಯಾವುದಕ್ಕೂ ತಾನು ಹೆದರುವುದಿಲ್ಲ ಎಂದು ಹೇಳಿದರು.
ಸಾಮಾನ್ಯ ಸಭೆಯಲ್ಲಿ ಯಾವುದೇ ಕಾಮಗಾರಿಗಳ ಬಗ್ಗೆ ಗೊಂದಲವಿದ್ದಲ್ಲಿ ಪುರಸಭೆಯಲ್ಲಿ ದಾಖಲೆ ಪರಿಶೀಲಿಸಬಹುದು ಮತ್ತು ಕಾಮಗಾರಿಗಳಲ್ಲಿ ಲೋಪದೋಷ ಕಂಡು ಬಂದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದ್ದೇನೆ. ಒಂದು ತಿಂಗಳು ಆಗುತ್ತಾ ಬಂದರೂ ಯಾರೂ ಕೂಡ ಕಾಮಗಾರಿಗಳ ದಾಖಲೆ ಪರಿಶೀಲಿಸಲು ಬಂದಿಲ್ಲ. ಪುರಸಭೆಯಲ್ಲಿ ನಡೆಸಿದ ಎಲ್ಲಾ ಕಾಮಗಾರಿಗಳನ್ನೂ ಇ-ಟೆಂಡರ್‌ಗಳ ಮೂಲಕವೇ ನಡೆಸಲಾಗುತ್ತಿದೆ. ಯಾರು ಕಡಿಮೆ ದರಕ್ಕೆ ಟೆಂಡರ್ ಹಾಕಿದ್ದಾರೋ ಅವರಿಗೆ ಟೆಂಡರ್ ಆಗುತ್ತದೆ ಎಂದರು.
ಕಳೆದ ಒಂದು ವರ್ಷದಲ್ಲಿ ಪುರಸಭೆಗೆ ಹೊಸ ಜೆಸಿಬಿ ಯಂತ್ರ, ಇನ್ನೋವಾ ಕಾರು, ಟಿಪ್ಪರ್, ಕುಡಿಯವ ನೀರು ಸರಬರಾಜು ಟ್ಯಾಂಕರ್ ಖರೀದಿಸಲಾಗಿದೆ. ಕುಡಿಯುವ ನೀರಿನ ಘಟಕದಲ್ಲಿ ಶುದ್ಧೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. 2017ರಿಂದ ಬೀದಿ ದೀಪ ಖರೀದಿಸಿಲ್ಲವಾಗಿದ್ದು, ಈ ಸಲ 400 ಬೀದಿದೀಪಗಳನ್ನು ಖರೀದಿಸಿ ಎಲ್ಲಾ ವಾರ್ಡ್ ಗಳಿಗೂ ಅಗತ್ಯವಿದ್ದ ಕಡೆ ಅಳವಡಿಸಲು ಸೂಚಿಸಲಾಗಿದೆ. ಈ ಕಾಮಗಾರಿಗೂ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭೆಯಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆುಕೊಂಡು ಕೆಲಸ ಮಾಡುತ್ತಿದ್ದೇನೆ. ಹೆಚ್ಚಿನ ಸದಸ್ಯರು ತನಗೆ ಸಹಕಾರ ನೀಡುತ್ತಿದ್ದಾರೆ. ಕೆಲವರು ಪುರಸಭೆಯ ಇನ್ನೋವಾ ಕಾರಿಗೆ ಅಳವಡಿಸಲಾಗಿದ್ದ ಫಲಕವನ್ನು ಸಾರಿಗೆ ಅಧಿಕಾರಿಗೆ ತಿಳಿಸಿ ಅವರ ಮೇಲೆ ಒತ್ತಡ ತಂದು ತೆಗೆಸಿ ಪುರಸಭೆಗೆ ಮುಜುಗರ ಆಗುಂತೆ ಮಾಡಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರವೂಫ್, ಅಜೀಂ ಮತ್ತಿತರರಿದ್ದರು.
''ಭಟ್ಕಳ ಪುರಸಭೆಗೆ ಅಂಗಡಿ ಮಳಿಗೆಗಳಿಂದ 1.50 ಕೋಟಿ ಅಧಿಕ ಬಾಡಿಗೆ ಬಾಕಿ ಇದ್ದು, ವಸೂಲಿಗೆ ಸೂಕ್ತ ಕ್ರಮಕೈಗೊಳ್ಳ ಲಾಗುವುದು. ಸದ್ಯದಲ್ಲೇ 66 ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಹಳೇ ಮೀನು ಮಾರುಕಟ್ಟೆಯನ್ನು ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಕ್ಕೂ ಕ್ರಮ ಕೈಗೊಳ್ಳಲಾಗುವುದು. ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಯಾವುದೇ ಲೋಪದೋಷ ಇಲ್ಲದೇ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದೇನೆ. ನನ್ನ ಮತ್ತು ಪುರಸಭೆಯ ವಿರುದ್ಧದ ಪಿತೂರಿಗೆ ಯಾವುದೇ ಕಾರಣಕ್ಕೂ ನಾನು ಹೆದರುವುದಿಲ್ಲ''.
- ಫರ್ವೇಝ್ ಕಾಶಿಮ್‌ಜಿ, ಪುರಸಭೆಯ ಅಧ್ಯಕ್ಷ







