ನಮ್ಮ ಗಣರಾಜ್ಯದ ನೈಜ ಪೌರರು ಈಗ ಹೋರಾಡಬೇಕಾಗಿದೆ
ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಮಾಡಿದ ಭಾಷಣ

ನಮ್ಮದು ಜೀವಂತವಾದ ಸಂವಿಧಾನವಾಗಿದೆ. ನಾವು ಅದಕ್ಕೆ ಉಸಿರು ನೀಡಲು ಇಚ್ಛಿಸುವವರೆಗೆ ಅದು ಉಸಿರಾಡುತ್ತಿರುತ್ತದೆ, ಇಲ್ಲದೆ ಇದ್ದಲ್ಲಿ ಅದು ಕೇವಲ ಕಪ್ಪು, ಬಳಿ ಕಾಗದದ ಚೂರಷ್ಟೇ ಆಗುತ್ತದೆ. ಯಾವುದೇ ಬಹುಸಂಖ್ಯಾತವಾದಿ ಸರಕಾರವು ಅದಕ್ಕೆ ಅನಿಶ್ಚಿತ ಸನ್ನಿವೇಶದ ಕೆಸರನ್ನು ಲೇಪಿಸಬಹುದಾಗಿದೆ. ಚುನಾಯಿತ ಸರಕಾರವು ಮಾತು ಹಾಗೂ ಕೃತಿಯಲ್ಲಿ ಸಂವಿಧಾನವನ್ನು ಎತ್ತಿಹಿಡಿಯಲು ಜನತೆಯ ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ವೇಳೆ ಸರಕಾರವು ವಿಫಲವಾದಲ್ಲಿ ನಾವೆಲ್ಲರೂ ವಿಫಲರಾಗುತ್ತೇವೆ.
ಭಾಗ-1
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಗುರುವಾರ ಲೋಕಸಭೆಯಲ್ಲಿ ಭಾವೋದ್ವಿಗ್ನದ ಭಾಷಣ ಮಾಡಿದರು. ಆದರೆ ತನಗೆ 13 ನಿಮಿಷಗಳ ಅವಧಿ ಮುಗಿಯುವ ಮುನ್ನವೇ ಸಭಾಧ್ಯಕ್ಷರು ತನ್ನ ಭಾಷಣ ಮುಂದುವರಿಸದಂತೆ ತಡೆದರು ಎಂದು ಮಹುವಾ ಮೊಯಿತ್ರಾ ಆಪಾದಿಸಿದ್ದಾರೆ. ಆನಂತರ ಮಹುವಾ ಅವರು ಲೋಕಸಭೆಯ ಹೊರಗಡೆ, ಮಾಧ್ಯಮಗಳ ಮುಂದೆ ತನ್ನ ಭಾಷಣವನ್ನು ಮುಂದುವರಿಸಿದ್ದರು.
ತನ್ನ ಭಾಷಣದಲ್ಲಿ ಅವರು ಹಲವಾರು ಮಾನವಹಕ್ಕುಗಳ ಉಲ್ಲಂಘನೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಧ್ವನಿಯೆತ್ತಿದರು ಹಾಗೂ ಕಳೆದ ಕೆಲವು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದ ಆಡಳಿತವು ಅತಿರೇಕಗಳನ್ನು ನಡೆಸಿರುವುದಾಗಿ ಆಪಾದಿಸಿದರು. ಆಕೆಯ ಭಾಷಣದ ಪೂರ್ಣ ಪಾಠ ಇಲ್ಲಿದೆ.
ಮಾನ್ಯ ಸಭಾಧ್ಯಕ್ಷರೇ, ನನ್ನ ಗೌರವಾನ್ವಿತ ಸಹದ್ಯೋಗಿಗಳೇ, ರಾಷ್ಟ್ರಪತಿಯವರ ಭಾಷಣದ ಬಗ್ಗೆ ನನ್ನ ಪಕ್ಷವಾದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪರವಾಗಿ ನಾನು ಪ್ರತಿಕ್ರಿಯಿಸಲು ಇಲ್ಲಿ ನಿಂತಿದ್ದೇನೆ.
ರಾಷ್ಟ್ರಪತಿಯವರ ಭಾಷಣವು ಒಕ್ಕೂಟ ವ್ಯವಸ್ಥೆಯ ಬಗ್ಗೆ ಸರಕಾರದ ವೌಲ್ಯಮಾಪನವಾಗಿದೆ. ಆದರೆ ಆ ವೌಲ್ಯಮಾಪನಕ್ಕೆ ತೀವ್ರವಾಗಿ ಅಸಮ್ಮತಿಯನ್ನು ಸೂಚಿಸಲು ನಾನು ನಿಮ್ಮ ಮುಂದೆ ನಿಂತಿದ್ದೇನೆ ಹಾಗೂ ನಮ್ಮೆಲ್ಲರನ್ನು ಕಾಡುವ ಅತ್ಯಂತ ಮಹತ್ವದ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಮಗೆ ಎಂತಹ ಭಾರತ ಬೇಕಿದೆ. ನಾವು ಪ್ರತಿಪಾದಿಸಲು, ಹೋರಾಡಲು, ನಿಂದಿಸಲು ಹಾಗೂ ಜೈಲು ಶಿಕ್ಷೆಯನ್ನು ಅನುಭವಿಸಲೂ ಸಿದ್ಧರಿರುವ ಭಾರತದ ಚಿಂತನೆ ಯಾವುದು?.
ನಮ್ಮದು ಜೀವಂತವಾದ ಸಂವಿಧಾನವಾಗಿದೆ. ನಾವು ಅದಕ್ಕೆ ಉಸಿರು ನೀಡಲು ಇಚ್ಛಿಸುವವರೆಗೆ ಅದು ಉಸಿರಾಡುತ್ತಿರುತ್ತದೆ, ಇಲ್ಲದೆ ಇದ್ದಲ್ಲಿ ಅದು ಕೇವಲ ಕಪ್ಪು, ಬಳಿ ಕಾಗದದ ಚೂರಷ್ಟೇ ಆಗುತ್ತದೆ. ಯಾವುದೇ ಬಹುಸಂಖ್ಯಾತವಾದಿ ಸರಕಾರವು ಅದಕ್ಕೆ ಅನಿಶ್ಚಿತ ಸನ್ನಿವೇಶದ ಕೆಸರನ್ನು ಲೇಪಿಸಬಹುದಾಗಿದೆ. ಚುನಾಯಿತ ಸರಕಾರವು ಮಾತು ಹಾಗೂ ಕೃತಿಯಲ್ಲಿ ಸಂವಿಧಾನವನ್ನು ಎತ್ತಿಹಿಡಿಯಲು ಜನತೆಯ ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ವೇಳೆ ಸರಕಾರವು ವಿಫಲವಾದಲ್ಲಿ ನಾವೆಲ್ಲರೂ ವಿಫಲರಾಗುತ್ತೇವೆ. ಹೀಗಾಗಿ, ಭಾರತೀಯರು ಸುಮ್ಮನೆ ಕುಳಿತುಕೊಂಡು ಟಿವಿ ವೀಕ್ಷಿಸುತ್ತಾ ಪರಸ್ಪರ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುವುದಷ್ಟೇ ಸಾಕಾಗಲಾರದು. ಈ ಸರಕಾರವು ಇತಿಹಾಸವನ್ನು ಬದಲಾಯಿಸಲು ಬಯಸುತ್ತಿದೆ. ಅವರು ಭವಿಷ್ಯದ ಬಗ್ಗೆ ಭಯಪಡುತ್ತಿದ್ದಾರೆ ಹಾಗೂ ಅವರು ವಾಸ್ತವತೆಯ ಬಗ್ಗೆ ಅಪನಂಬಿಕೆ ಹೊಂದಿದ್ದಾರೆ. 1960ರ ದಶಕದಲ್ಲಿಯೇ ರಾಬರ್ಟ್ ಎಫ್.ಕೆನಡಿ ಅವರು ಇಂತಹ ದ್ವೇಷಕಾರಿ ಪಡೆಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.
ಗೌರವಾನ್ವಿತ ರಾಷ್ಟ್ರಪತಿಯವರು ತನ್ನ ಭಾಷಣದಲ್ಲಿ ಮೊದಲಿಗೆ ಭಾರತದ ಹಕ್ಕುಗಳನ್ನು ಸಂಪಾದಿಸಿಕೊಟ್ಟ ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದ್ದಾರೆ. ಅವರು ಗುರು ತೇಗ್ ಬಹದ್ದೂರ್, ವಿ.ಒ.ಚಿದಂಬರಂ ಪಿಳ್ಳೈ ಹಾಗೂ ನೇತಾಜಿ ಸುಭಾಶ್ಚಂದ್ರ ಭೋಸ್ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಇದು ಕೇವಲ ಬಾಯಿ ಉಪಚಾರವಷ್ಟೇ ಆಗಿದೆ. ವಾಸ್ತವಿಕವಾಗಿ ಭಾರತದ ಭೂತಕಾಲವನ್ನು ಅಂದರೆ ಸಜ್ಜನಿಕೆ, ಬಹುತ್ವವಾದ ಹಾಗೂ ಜಾತ್ಯತೀತತೆಯ ಭೂತಕಾಲವನ್ನು ಸ್ಮರಿಸಿಕೊಂಡಲ್ಲಿ ಈ ಸರಕಾರಕ್ಕೆ ಅಸುರಕ್ಷತೆಯ ಭಾವನೆಯುಂಟಾಗುತ್ತದೆ.
ಅವರು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದ ಗಣರಾಜ್ಯೋತ್ಸವದ ಟ್ಯಾಬ್ಲೊಗಳಿಗೆ ಅವಕಾಶ ನೀಡುವುದಿಲ್ಲ. ನಮಗೆ ಜೈಹಿಂದ್ ಹೇಳಲು ಕಲಿಸಿದಂತಹ ನೇತಾಜಿಯವರ ಟ್ಯಾಬ್ಲೊವನ್ನು, ಭಾರತೀಯರನ್ನು ವಿಭಜಿಸಿದರೂ ಅವರು ಯಾವತ್ತೂ ಒಂದೇ ತಾಯಿಯ ಮಕ್ಕಳು ಎಂದು ಹೇಳಿದ ಸುಬ್ರಹ್ಮಣ್ಯ ಭಾರತಿಯಾರ್ ಅವರ ಟ್ಯಾಬ್ಲೊವನ್ನು, ದೇಶದ್ರೋಹದ ಆರೋಪದಲ್ಲಿ ಜೈಲು ಶಿಕ್ಷೆಗೆ ಒಳಗಾದರೂ ತನ್ನ ರಾಜಕೀಯ ಬಂಡಾಯವನ್ನು ಸ್ಥಗಿತಗೊಳಿಸಲು ನಿರಾಕರಿಸಿದ ವಿ.ಒ.ಚಿದಂಬರಂ ಪಿಳ್ಳೆಯವರ ಟ್ಯಾಬ್ಲೊವನ್ನು ಹಾಗೂ ಶಿಲೆಯೊಂದನ್ನು ಹೆಕ್ಕಿತಂದು, ಅದನ್ನು ಈಳವ ಸಮುದಾಯ ಆರಾಧಿಸುವ ಶಿವನಾಗಿ ಪ್ರತಿಷ್ಠಾಪಿಸಿದ ಶ್ರೀನಾರಾಯಣ ಗುರು ಅವರ ಟ್ಯಾಬ್ಲೊಗೆ ಅನುಮತಿ ನಿರಾಕರಿಸಿದೆ.
ಕಾಲ್ಪನಿಕ ಭೂತಕಾಲವನ್ನು ಸ್ಮರಿಸಿಕೊಳ್ಳುವುದು ಮುಂದುವರಿಯುತ್ತಲೇ ಹೋಗುತ್ತದೆ. ಈ ಸರಕಾರವು ಸಾವರ್ಕರ್ ಅವರನ್ನು ಸ್ವಾತಂತ್ರ ಹೋರಾಟಗಾರನನ್ನಾಗಿ ಮರುಸಂಶೋಧಿಸಿರುವುದು (ತನ್ನ ಬಿಡುಗಡೆಗೆ ಯಾಚಿಸಿ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿರುವುದನ್ನು ಈಗ ಅದನ್ನು ವ್ಯೆಹಾತ್ಮಕ ತಂತ್ರಗಾರಿಕೆ ಎಂದು ಬಣ್ಣಿಸಲಾಗುತ್ತಿದೆ. ಕಟ್ಟಾ ಫ್ಯಾಶಿಸ್ಟ್ ವಿರೋಧಿ ಭಗತ್ ಸಿಂಗ್‌ರನ್ನು ಬಳಸಿಕೊಳ್ಳುತ್ತಿದೆ ಹಾಗೂ ಗೃಹ ಸಚಿವರಾದ ಬಳಿಕ ಆರೆಸ್ಸೆಸ್‌ಗೆ ನಿಷೇಧ ವಿಧಿಸಿದ್ದ ವಲ್ಲಭಬಾಯ್ ಪಟೇಲ್‌ರನ್ನು ಬಳಸಿಕೊಂಡಿದೆ.
ರಾಷ್ಟ್ರಪತಿಯವರ ಭಾಷಣವು ಹಲವಾರು ಸಂದರ್ಭಗಳಲ್ಲಿ ನೇತಾಜಿಯವರನ್ನು ಪ್ರಸ್ತಾವಿಸಿದೆ. ನೇತಾಜಿಯವರು ಇದೇ ರೀತಿಯಾಗಿ ಹೇಳಿರುವುದನ್ನು ನಾನು ಈ ಗಣರಾಜ್ಯಕ್ಕೆ ನೆನಪುಮಾಡಿಕೊಳ್ಳುತ್ತಿದ್ದೇನೆ. ಭಾರತ ಸರಕಾರಕ್ಕೆ, ಎಲ್ಲಾ ಧರ್ಮಗಳ ಬಗ್ಗೆ ತಟಸ್ಥ ಹಾಗೂ ಪಕ್ಷಪಾತರಹಿತ ವರ್ತನೆಯನ್ನು ಪ್ರದರ್ಶಿಸಬೇಕಾಗಿದೆ. ಮುಸ್ಲಿಮರ ನರಮೇಧಕ್ಕಾಗಿ ರಕ್ತಹೆಪ್ಪುಗಟ್ಟುವಂತಹ ಕರೆಗಳನ್ನು ನೀಡಿದ ಹರಿದ್ವಾರ ಧರ್ಮಸಂಸದ್‌ಗೆ ನೇತಾಜಿ ಅನುಮೋದನೆ ನೀಡುತ್ತಿದ್ದರೇ?. ಈಗ ಬಾಂಗ್ಲಾದೇಶಕ್ಕೆ ಸೇರಿರುವ ಕೊಮಿಲ್ಲಾದಲ್ಲಿ 1938ರ ಜೂನ್ 14ರಂದು ಅವರು ಹೀಗೆ ಹೇಳಿದ್ದರು. ‘‘ಕೋಮುವಾದವು ತನ್ನ ಎಲ್ಲಾ ನಗ್ನತೆಗಳೊಂದಿಗೆ ಅದರ ಕೊಳಕು ತಲೆಯನ್ನು ಎತ್ತಿದೆ’’ ಎಂದಿದ್ದರು. ನೇತಾಜಿಯವರ ಇಂಡಿಯನ್ ನ್ಯಾಶನಲ್ ಆರ್ಮಿ (ಐಎನ್‌ಎ)ಯ ಚಿಹ್ನೆಯು ಟಿಪ್ಪುಸುಲ್ತಾನ್‌ನ ಜಿಗಿಯುವ ಹುಲಿಯ ಚಿಹ್ನೆಯಿಂದ ಆರಿಸಿಕೊಂಡಿತ್ತು. ಇದೇ ಟಿಪ್ಪು ಸುಲ್ತಾನ್‌ನನ್ನು ನೀವು ನಮ್ಮ ಪಠ್ಯಪುಸ್ತಕಗಳಿಂದ ಅಳಿಸಿಹಾಕಿದ್ದೀರಿ. ಆತನ ಹೆಸರನ್ನು ಕ್ರೀಡಾಂಗಣಗಳಿಗೆ ಅಥವಾ ರಸ್ತೆಗಳಿಗೆ ಇಡುವುದನ್ನು ನೀವು ಸಹಿಸಲಾರಿರಿ. ಐಎನ್‌ಎನ ಧ್ಯೇಯವಾಕ್ಯವು ಇತ್ತಿಹಾದ್, ಇತಿಮದ್ ಮತ್ತು ಕುರ್ಬಾನಿ (ಏಕತೆ, ನಂಬಿಕೆ ಹಾಗೂ ತ್ಯಾಗ) ಎಂಬ ಮೂರು ಉರ್ದು ಪದಗಳಿಂದ ಕೂಡಿದ್ದಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಮೊದಲ ಹಾಗೂ ಅಧಿಕೃತ ಭಾಷೆಯ ಸ್ಥಾನದಲ್ಲಿ ಉರ್ದು ಭಾಷೆಯನ್ನು ತೆರವುಗೊಳಿಸಿ, ಅದರ ಜಾಗದಲ್ಲಿ ಹಿಂದಿಯನ್ನು ತರಲು ಈ ಸರಕಾರ ಉತ್ಸುಕವಾಗಿದೆ. ರಾಷ್ಟ್ರಪತಿಯವರ ಭಾಷಣವು ಬಾಪು ಅವರ ನಾಯಕತ್ವದಲ್ಲಿ ಖಾದಿಯು ಆತ್ಮಸಾಕ್ಷಿಯ ಸಂಕೇತವಾಗಿದೆಯೆಂಬುದಾಗಿ ಪ್ರಸ್ತಾವಿಸಿದೆ. ಆದರೆ ಅಪವಿತ್ರವಾದ ಧರ್ಮಸಂಸದ್‌ಗಳು ಬಾಪುವನ್ನು ಮತ್ತೊಮ್ಮೆ ಕೊಲ್ಲುವಂತೆ ಕರೆ ನೀಡುತ್ತವೆ. ಗಾಂಧೀಜಿಯವರ ಹಂತಕರನ್ನು ವೈಭವೀಕರಿಸುವಲ್ಲಿ ನೀವು ಈಗಾಗಲೇ ಸಫಲರಾಗಿರಬಹುದು. ಆದರೆ ಅವರ ಅಚ್ಚುಮೆಚ್ಚಿನ ಸ್ತುತಿಗೀತೆಯಿಲ್ಲದ ಬೀಟಿಂಗ್ ದಿ ರಿಟ್ರೇಟ್ ನೋಡುವ ಮಕ್ಕಳಿಗಾಗಿ, ಕೆಲವೊಂದು ಹಾಡಿನ ಸಾಲುಗಳನ್ನು ನಿಮಗೆ ನೆನಪಿಸುತ್ತಿದ್ದೇನೆ.
ಭಯಭೀತಗೊಳಸದಂತೆ ಬನ್ನಿ ಅರಸರಿಗೆ ಅರಸರಾಗಿ
ಆದರೆ ದಯಾಳು ಮತ್ತು ಉತ್ತಮರಾಗಿ, ನಿಮ್ಮ ರೆಕ್ಕೆಗಳಲ್ಲಿ ಉಪಶಮನ ನೀಡುವುದರೊದಿಗೆ
ಎಲ್ಲಾ ದುಃಖಗಳಿಗೆ ಕಣ್ಣೀರಾಗಿ, ಪ್ರತಿಯೊಂದು ಅಹವಾಲಿಗೂ ಹೃದಯವಾಗಿ ಬನ್ನಿ,
ಪಾಪಿಗಳ ಸ್ನೇಹಿತನೇ, ನನ್ನೊಂದಿಗಿದ್ದು ಬಿಡು
ರಾಷ್ಟ್ರಪತಿಯವರ ಭಾಷಣವು ನಮ್ಮ ಹಕ್ಕುಗಳಿಗಾಗಿ ಹೋರಾಡಿದಂತಹ ಮಹಾನ್ ವ್ಯಕ್ತಿಗಳನ್ನು ಪ್ರಶಂಸಿಸುತ್ತದೆ. ಆದರೆ ಭಾರತೀಯರಿಗೆ ನಿಜಕ್ಕೂ ಅವರ ಸಾಂವಿಧಾನಿಕ ಹಕ್ಕುಗಳನ್ನು ಹಾಗೂ ಸ್ವಾತಂತ್ರಗಳನ್ನು ಭಾರತ ಹಾಗೂ ಭಾರತೀಯರಿಗೆ ಖಾತರಿಪಡಿಸಿದಲ್ಲಿ ತಮ್ಮ ಭವಿಷ್ಯವೇನಾಗಬಹುದೆಂಬ ಬಗ್ಗೆ ನಮ್ಮ ಗಣರಾಜ್ಯದ ಯಜಮಾನರು ಭಯಪಟ್ಟಿದ್ದಾರೆ. 2021ನೇ ಸಾಲಿನ ಫ್ರೀಡಂ ಹೌಸ್ ವರದಿಯು ಭಾರತದ ಸ್ಥಾನಮಾನವನ್ನು ಪೂರ್ಣ ಸ್ವಾತಂತ್ರದ ರಾಷ್ಟ್ರದಿಂದ, ಭಾಗಶಃ ಸ್ವಾತಂತ್ರವಿರುವ ರಾಷ್ಟ್ರದ ಸ್ಥಾನಕ್ಕೆ ಬದಲಾಯಿಸಿದ್ದೀರಿ. ವಿಶ್ವ ಪತ್ರಿಕಾ ಸ್ವಾತಂತ್ರದ ಸೂಚ್ಯಂಕದಲ್ಲಿ ಭಾರತವು 180ರ ಪೈಕಿ 142 ಸ್ಥಾನವನ್ನು ಉಳಿಸಿಕೊಂಡಿದೆ. ಈಗಲೂ ಅದು ಪತ್ರಕರ್ತರಿಗೆ ಜಾಗತಿಕವಾಗಿ ಅತ್ಯಂತ ಅಪಾಯಕಾರಿಯಾದ ಸ್ಥಳವಾಗಿ ಪರಿಣಮಿಸಿದೆ. 2020ನೇ ಸಾಲಿನ ಮಾನವ ಸ್ವಾತಂತ್ರ ಸೂಚ್ಯಂಕವು ವೈಯಕ್ತಿಕ, ನಾಗರಿಕ ಹಾಗೂ ಆರ್ಥಿಕ ಸ್ವಾತಂತ್ರದಲ್ಲಿ 162 ದೇಶಗಳ ಪೈಕಿ 111ನೇ ಸ್ಥಾನಕ್ಕಿಳಿಸಿದೆ.
ಭವಿಷ್ಯತ್ತಿನ ಭಾರತವು ಅದರ ಸ್ವಂತ ಸ್ವಭಾವದೊಂದಿಗೆ ನೆಮ್ಮದಿಯಿಂದ ಇರಬಹುದೆಂಬ ಹೆದರಿಕೆ ನಿಮ್ಮನ್ನು ಕಾಡುತ್ತಿದೆ. ಭಾರತವು ಸಂಘರ್ಷಾತ್ಮಕ ವಾಸ್ತವತೆಗಳೊಂದಿಗೆ ನೆಮ್ಮದಿಯಿಂದ ಇರಬಲ್ಲದಾಗಿದೆ. ಜೈನ ಬಾಲಕನೊಬ್ಬ ಮನೆಯವರ ಕಣ್ಣು ತಪ್ಪಿಸಿ ಅಹ್ಮದಾಬಾದ್‌ನ ಬೀದಿಬದಿಯ ಗಾಡಿಯಲ್ಲಿ ಕಥಿ ಕಬಾಬ್ ಅನ್ನು ಆಸ್ವಾದಿಸಬಹುದೆಂಬ ಹೆದರಿಕೆ ನಿಮ್ಮನ್ನು ಕಾಡುತ್ತಿದೆ. ಗುಜರಾತ್‌ನ ನಗರಪಾಲಿಕೆಗಲ್ಲಿ ಬೀದಿ ಬದಿಯಲ್ಲಿ ಮಾಂಸಾಹಾರಿ ಆಹಾರವನ್ನು ನೀವು ನಿಷೇಧಿಸಿದ್ದೀರಿ. ಚುನಾವಣೆಗೆ ಮುನ್ನ ಪ್ರತಿಪಕ್ಷ ನಾಯಕರ ಮೇಲೆ ದಾಳಿ ನಡೆಸುವಂತೆ ಸರಕಾರಿ ಏಜೆನ್ಸಿಗಳಿಗೆ ಕುಮ್ಮಕ್ಕು ನೀಡಲು ನಿಮಗೆ ಸಾಧ್ಯವಾಗದಂತಹ ಭವಿಷ್ಯದ ಬಗ್ಗೆ ಭಯಪಡುತ್ತಿದ್ದೀರಿ. ಹೀಗಾಗಿ ನಿಮಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ವರಿಷ್ಠರ ಅಧಿಕಾರಾವಧಿಯನ್ನು ವಿಸ್ತರಿಸುವ ಅಗತ್ಯವುಂಟಾಗಿದೆ. ನಿಮ್ಮ ಬಿಡ್ಡಿಂಗ್ ಅನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬ ಆಧಾರದಲ್ಲಿ ಅವರ ಅವಧಿಯನ್ನು ವಿಸ್ತರಿಸಲಾಗಿದೆ. ಕೇಂದ್ರ ಸರಕಾರದಿಂದ ಬೆದರಿಕೆಯಿಲ್ಲದೆ ರಾಜ್ಯಗಳಲ್ಲಿ ಅಧಿಕಾರಿಗಳು ಮುಕ್ತವಾಗಿ ಕರ್ತವ್ಯ ನಿರ್ವಹಿಸಬಹುದಾದಂತಹ ಭವಿಷ್ಯದ ಬಗ್ಗೆ ನೀವು ಭಯಪಟ್ಟುಕೊಂಡಿದ್ದೀರಿ. ಹೀಗಾಗಿ ನೀವು ಐಎಎಸ್ ಕೇಡರ್ ನಿಯಮಗಳನ್ನು ತಿದ್ದುಪಡಿಗೊಳಿಸಿದ್ದೀರಿ. ಭವಿಷ್ಯದಲ್ಲಿ ನೀವು ಅಪ್ರಸಕ್ತರಾಗಲಿದ್ದೀರೆಂಬ ಭೀತಿಯಿಂದಾಗಿ ನೀವು ಈ ರೀತಿಯಾಗಿ ವರ್ತಿಸುತ್ತಿದ್ದೀರಿ. ನೀವು ನಮ್ಮ ಮತಗಳಿಂದ ಮಾತ್ರವೇ ತೃಪ್ತಿಪಟ್ಟುಕೊಂಡಿಲ್ಲ. ನೀವು ನಾವೇನು ತಿನ್ನಬೇಕು, ನಾವೇನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಎಂದು ನಮಗೆ ತಿಳಿಸುವುದಕ್ಕಾಗಿ ನಮ್ಮ ಮನೆಯೊಳಗೆ ಮಾತ್ರವಲ್ಲದೆ ನಮ್ಮ ತಲೆಯೊಳಗೆ ಸೇರಿಕೊಳ್ಳಲೂ ಬಯಸಿದ್ದೀರಿ.
ಆದರೆ ನಿಮ್ಮ ಭಯವೊಂದರಿಂದಲೇ ಭವಿಷ್ಯವನ್ನು ದೂರವಿಡಲು ಸಾಧ್ಯವಿಲ್ಲ.







