ಚರ್ಚ್ ಗಳಲ್ಲಿ ಲೈಂಗಿಕ ದೌರ್ಜನ್ಯ ಹಗರಣ: ಕ್ಷಮೆ ನೀಡಲು ಮಾಜಿ ಪೋಪ್ ಬೆನೆಡಿಕ್ಟ್ ಕೋರಿಕೆ
ವ್ಯಾಟಿಕನ್ ಸಿಟಿ, ಫೆ.8: ತಾನು ಪೋಪ್ ಆಗಿದ್ದಾಗ ಚರ್ಚ್ ಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿದ್ದ ನಿಂದನೆ ಪ್ರಕರಣಗಳ ಹಗರಣಕ್ಕೆ ಸಂಬಂಧಿಸಿ ತನಗೆ ಕ್ಷಮೆ ನೀಡಬೇಕು ಎಂದು ಕೋರಿರುವ ಮಾಜಿ ಪೋಪ್ ಬೆನೆಡಿಕ್ಟ್, ಆದರೆ ಮ್ಯೂನಿಚ್ನ ಆರ್ಚ್ ಬಿಷಪ್ ಆಗಿದ್ದ ಸಂದರ್ಭ ಇಂತಹ ಪ್ರಕರಣಗಳನ್ನು ತಾನು ಮುಚ್ಚಿಹಾಕಲು ಪ್ರಯತ್ನಿಸಿದ್ದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಎಲ್ಲಾ ಸಂತ್ರಸ್ತರಿಗೆ ನನ್ನ ಹೃದಯಾಂತರಾಳದ ದುಃಖ ಮತ್ತು ಕ್ಷಮಿಸಿಬಿಡುವಂತೆ ಹೃತ್ಪೂರ್ವಕ ಕೋರಿಕೆ ಮಾತ್ರ ಮಾಡಬಲ್ಲೆ ಎಂದು 94 ವರ್ಷದ ಮಾಜಿ ಪೋಪ್ ಹೇಳಿದ್ದಾರೆ. 1980ರಲ್ಲಿ ಚರ್ಚ್ ಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಆಗ ಪೋಪ್ ಆಗಿದ್ದ ಬೆನೆಡಿಕ್ಟ್ ನಿರ್ವಹಿಸಿದ ರೀತಿಯ ಬಗ್ಗೆ ಜರ್ಮನ್ ನ ತನಿಖಾ ಸಂಸ್ಥೆ ಕಳೆದ ತಿಂಗಳು ನಡೆಸಿದ ವಿಚಾರಣೆ ಸಂದರ್ಭ ಬೆನೆಡಿಕ್ಟ್ ಈ ಹೇಳಿಕೆ ನೀಡಿದ್ದಾರೆ. ನನಗೆ ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಉನ್ನತ ಜವಾಬ್ದಾರಿಯಿತ್ತು. ನನ್ನ ಅಧಿಕಾರಾವಧಿಯಲ್ಲಿ ವಿವಿಧೆಡೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ತಪ್ಪುಗಳಿಗಾಗಿ ನನಗೆ ಇದಕ್ಕಿಂತ ಹೆಚ್ಚಿನ ನೋವಿದೆ ಎಂದವರು ಹೇಳಿದ್ದಾರೆ.
1980ರಲ್ಲಿ ಮ್ಯೂನಿಚ್ನ ಆರ್ಚ್ ಬಿಷಪ್ ಆಗಿದ್ದ ಸಂದರ್ಭದಲ್ಲಿ , 4 ಪಾದ್ರಿಗಳು ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಮಾಹಿತಿ ಇದ್ದರೂ ಅದನ್ನು ತಡೆಯಲು ವಿಫಲವಾದ ಆರೋಪ ಬೆನೆಡಿಕ್ಟ್ ಮೇಲಿದೆ. 2013ರಲ್ಲಿ ಅವರು ಪೋಪ್ ಹುದ್ದೆಯಿಂದ ನಿರ್ಗಮಿಸಿದ್ದರು. ಈಗ ವೃದ್ಧಾಪ್ಯದ ಅನಾರೋಗ್ಯದಿಂದ ಬಳಲುತ್ತಿರುವ ಬೆನೆಡಿಕ್ಟ್ ಅವರಿಗೆ ವಿಚಾರಣಾ ಸಮಿತಿಯ ಎದುರು ಹಾಜರಾಗಲು ಸಹಾಯಕರ ತಂಡವನ್ನು ಒದಗಿಸಲಾಗಿದೆ. ಆರ್ಚ್ ಬಿಷಪ್ ಆಗಿದ್ದ ಬೆನೆಡಿಕ್ಟ್ ಅವರು ಲೈಂಗಿಕ ದೌರ್ಜನ್ಯ ಹಗರಣ ಮುಚ್ಚಿಹಾಕುವ ಯಾವುದೇ ಪ್ರಯತ್ನ ನಡೆಸಿಲ್ಲ ಅಥವಾ ಇಂತಹ ಕೃತ್ಯದಲ್ಲಿ ಶಾಮೀಲಾಗಿಲ್ಲ ಎಂಬ ಹೇಳಿಕೆಯನ್ನು ಸಹಾಯಕರ ತಂಡ ಓದಿ ಹೇಳಿತು.
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿದ್ದ ಪಾದ್ರಿ ಪೀಟರ್ ಹಲ್ಲರ್ಮನ್ ಅವರನ್ನು ಎಸ್ಸೆನ್ ನಗರದಿಂದ ಮ್ಯೂನಿಚ್ನ ಚರ್ಚ್‌ಗೆ ವರ್ಗಾವಣೆಗೊಳಿಸಿ ಮತ್ತೆ ಧರ್ಮಗುರುಗಳ ಹುದ್ದೆ ನೀಡಿದ ಪ್ರಕರಣದ ಬಗ್ಗೆ ವಿವರಣೆ ನೀಡಿದ ಬೆನೆಡಿಕ್ಟ್, ತಾನು ಪಾಲ್ಗೊಂಡಿದ್ದ ಸಭೆಯಲ್ಲಿ ಹಲ್ಲರ್ಮನ್ ಅವರನ್ನು ಧರ್ಮಗುರು ಆಗಿ ಮರು ನಿಯೋಜಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದರು.
ಲೈಂಗಿಕ ಹಗರಣಗಳ ತನಿಖೆ ನಡೆಸಿದ ಯಾವುದೇ ಸಮಿತಿಯೂ ಬೆನೆಡಿಕ್ಟ್ ಅವರು ಪಾದ್ರಿಗಳು ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದಿದ್ದರು ಅಥವಾ ಈ ಬಗ್ಗೆ ಸಂಶಯ ಹೊಂದಿದ್ದರು ಎಂದು ಉಲ್ಲೇಖಿಸಿಲ್ಲ ಎಂದು ಬೆನೆಡಿಕ್ಟ್ ಅವರ ತಂಡ ಹೇಳಿಕೆ ನಿೀಡಿದೆ.





