ಕೆಪಿಎಸ್ಸಿ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ವಿಧೇಯಕ ಮಂಡನೆಗೆ ಸಂಪುಟ ಅಸ್ತು

ಬೆಂಗಳೂರು, ಫೆ. 9: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) 2011ರಲ್ಲಿ ನಡೆಸಿದ್ದ ಗೆಜೆಟೆಡ್ ಪ್ರೊಬೇಷನರಿ(ಕೆಎಎಸ್) ಹುದ್ದೆಗಳ ಭರ್ತಿಗೆ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಸಂಬಂಧ ವಿಧಾನ ಮಂಡಲದಲ್ಲಿ ವಿಧೇಯಕ ಮಂಡಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಕೆಪಿಎಸ್ಸಿ 2011ರಲ್ಲಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. 2015ರಲ್ಲಿ ಅಂದಿನ ಸರಕಾರವೂ ಒಪ್ಪಿಕೊಂಡಿತ್ತು. ಅಲ್ಲದೆ, ಅಧಿಸೂಚನೆ ಅನ್ವಯ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ನಿರ್ಧರಿಸಿತ್ತು.
ಈ ಮಧ್ಯೆ ಸಿಐಡಿ ತನಿಖೆಯ ಅಂತಿಮ ವರದಿ ಬರುವವರೆಗೂ ನಿರೀಕ್ಷಿಸಿದೇ ಈ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಮಾಡುವ ತೀರ್ಮಾನವನ್ನು ಸರಕಾರ ಆ ವೇಳೆ ಕೈಗೊಂಡಿತ್ತು. ಈ ಆಯ್ಕೆ ಸಂವಿಧಾನಿಕವಾಗಿ ವಿಧಾನಮಂಡಲದಲ್ಲಿ ತೀರ್ಮಾನ ಕೈಗೊಂಡಿರಲಿಲ್ಲ. ಹೀಗಾಗಿ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಕೆಪಿಎಸ್ಸಿಯಲಿ ಆಯ್ಕೆಯಾದ 362 ಅಭ್ಯರ್ಥಿಗಳ ರಕ್ಷಣೆಗೆ ಸರಕಾರ ತೀರ್ಮಾನಿಸಿದೆ ಎಂದು ವಿವರಣೆ ನೀಡಿದರು.
ಫೆ.14ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ, ಅಂಗೀಕಾರ ಪಡೆಯಲಾಗುವುದು. ಈ ವಿಷಯದಲ್ಲಿ ನ್ಯಾಯಾಲಯವು ಎತ್ತಿರುವ ಆಕ್ಷೇಪಗಳಿಗೆ ನೀಡಬೇಕಿರುವ ಸಮಜಾಯಿಷಿಗಳನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ. ನೇಮಕಾತಿ ಆದೇಶ ನೀಡಲು ಸೀಮಿತವಾಗಿ ವಿಧೇಯವನ್ನು ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕೆಪಿಎಸ್ಸಿಯಲ್ಲಿ ಆಯ್ಕೆಯಾದ ಕೆಲವರು ಈಗಾಗಲೇ ಬೇರೆ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಸೇವೆಯಲ್ಲಿದ್ದಾರೆ. ಸೇವೆಗೆ ಸೇರುವವರಿಗೆ ಯಾವ ಹಂತದ ಹುದ್ದೆ ನೀಡಬೇಕು ಮತ್ತು ಅವರ ಸೇವಾ ಜೇಷ್ಠತೆ ಪರಿಗಣಿಸುವ ಸಂಬಂಧ ಕುರಿತು ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ ಸ್ಪಷ್ಟತೆ ನೀಡಲಾಗುವುದು ಎಂದು ಮಾಧುಸ್ವಾಮಿ ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.
ಖಾಸಗಿ ಸಂಸ್ಥೆಗೆ ಪೆರಿಫೆರಲ್ ರಿಂಗ್ ರಸ್ತೆ ಗುತ್ತಿಗೆ: ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಖಾಸಗಿ ಸಂಸ್ಥೆಗೆ ಭೂ ಸ್ವಾಧೀನ, ರಸ್ತೆ ನಿರ್ಮಾಣ ಹಾಗೂ ಟೋಲ್ ಸಂಗ್ರಹಿಸಲು 50 ವರ್ಷಗಳ ಅವಧಿಗೆ ಗುತ್ತಿಗೆ(ಲೀಸ್) ನೀಡಲು ತೀರ್ಮಾನಿಸಿದೆ ಎಂದು ಹೇಳಿದರು.
ಒಟ್ಟು 100 ಮೀಟರ್ ಅಗಲದ 71 ಕಿಲೋ ಮೀಟರ್ ಉದ್ದದ ಈ ರಸ್ತೆ ನಿರ್ಮಾಣಕ್ಕೆ ಸಂಬಂಧದ ಭೂ ಸ್ವಾಧೀನ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆ ನಡೆದು ಅಂತಿಮ ತೀರ್ಪು ಬಂದಿದ್ದು, ಇದೀಗ ಭೂ ಸ್ವಾಧೀನ ಮತ್ತು ರಸ್ತೆ ನಿರ್ಮಾಣಕ್ಕೆ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ವೆಚ್ಚವಾಗಲಿದ್ದು, ಸರಕಾರಕ್ಕೆ ಹೊರೆಯಾಗುವ ಕಾರಣಕ್ಕೆ ಖಾಸಗಿ ಸಂಸ್ಥೆಗೆ ಲೀಸ್ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ ಎಂದು ವಿವರ ನೀಡಿದರು.
ಘಟನೋತ್ತರ ಅನುಮೋದನೆ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ನಗರದಲ್ಲಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್‍ಆರ್‍ಒಟಿ ಆಧಾರದ ಮೇಲೆ ಗಿರಿಜಾರಮಣ ಇಂಪೆಕ್ಸ್ ಪ್ರೈವೇಟ್ ಲಿ.ಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ವಿವರ ನೀಡಿದರು.







