‘ಈ ತಿಂಗಳಲ್ಲಿ ಪರೀಕ್ಷೆ ಇದೆ, ಆದಷ್ಟು ಬೇಗ ಹೈಕೋರ್ಟ್ ತೀರ್ಪು ಬರಲಿ’
ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಗಳಾದ ಶಿಫಾ, ಆಲಿಯಾ ಅಸ್ಸಾದಿ

ಉಡುಪಿ, ಫೆ.9: ‘ಈ ತಿಂಗಳ ಕೊನೆಯಲ್ಲಿ ನಮಗೆ ಲ್ಯಾಬ್ ಪ್ರಾಕ್ಟಿಲ್ ಪರೀಕ್ಷೆ ಇದ್ದು, ಇದನ್ನು ಮನೆಯಲ್ಲಿ ಕುಳಿತು ಓದಲು ಆಗುವುದಿಲ್ಲ. ನಮಗೆ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಪಾಠವಾದರೆ ಮನೆಯಲ್ಲಿಯೇ ಓದಬಹುದು. ಆದರೆ ಪ್ರಾಕ್ಟಿಕಲ್‌ಗೆ ಏನು ಮಾಡುವುದು. ಅದಕ್ಕೆ ಲ್ಯಾಬ್ ಹಾಗೂ ಉಪಕರಣಗಳು ಬೇಕು. ಆದುದರಿಂದ ಆದಷ್ಟು ಬೇಗ ಈ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಬೇಕು ಎಂದು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಝ್ರಾ ಶಿಫಾ ಹಾಗೂ ಆಲಿಯಾ ಅಸ್ಸಾದಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ತುಂಬಾ ಭರವಸೆ ಹೊಂದಿದ್ದೇವೆ. ನ್ಯಾಯಮೂರ್ತಿ ನಮ್ಮ ಪರವಾಗಿ ಆದೇಶ ನೀಡಬಹುದೆಂದು ವಿಶ್ವಾಸ ಇದೆ. ನಾವು ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಕೇಳುತ್ತಿದ್ದೇವೆ. ತೀರ್ಮಾನ ವಿಳಂಬವಾದರೆ ನಮ್ಮ ಶಿಕ್ಷಣಕ್ಕೆ ತೊಂದರೆ ಆಗುತ್ತದೆ ಎಂದರು.
ಇದೊಂದು ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕಿನ ಭಾಗವಾದ ಕೇವಲ ಶಿರವಸ್ತ್ರದ ವಿಚಾರವಾಗಿದೆ. ತಲೆಗೆ ಶಾಲು ಹಾಕಿ ತರಗತಿ ಬರಲು ಅನುಮತಿ ನೀಡುವ ಪ್ರಕರಣವಾಗಿರುವುದರಿಂದ ಬೇಗನೇ ತೀರ್ಮಾನ ಮಾಡಿ ತೀರ್ಪು ಕೊಡಬಹುದಾಗಿದೆ. ಇದು ವಿಳಂಬ ಯಾಕೆ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಹಕ್ಕು ನಮಗೆ ಶೀಘ್ರವೇ ಸಿಗುವಂತಾಗಬೇಕು ಎಂದು ಅವರು ಹೇಳಿದರು.
'ಶಾಸಕರ ಹೇಳಿಕೆಯೇ ಕಾರಣ'
ಉಡುಪಿ ಶಾಸಕ ರಘುಪತಿ ಭಟ್ ಕೇಸರಿ ಶಾಲಿನ ಹೇಳಿಕೆ ನೀಡದಿದ್ದರೆ ಈ ವಿಚಾರ ಇಷ್ಟು ದೊಡ್ಡ ವಿವಾದ ಆಗುತ್ತಿರಲಿಲ್ಲ. ಅವರ ಹೇಳಿಕೆಯ ಬಳಿಕವೇ ಕೇಸರಿ ಶಾಲನ್ನು ವಿದ್ಯಾರ್ಥಿಗಳು ಹಾಕಿಕೊಂಡು ಬಂದಿದ್ದಾರೆ. ಈ ವಿವಾದಕ್ಕೆ ಅವರೇ ಕಾರಣ. ಇಲ್ಲದಿದ್ದರೆ ಈ ಮಟ್ಟದಲ್ಲಿ ವಿವಾದ ಆಗಲು ಸಾಧ್ಯವೇ ಇರುತ್ತಿಲ್ಲ. ನಮ್ಮ ಹಕ್ಕು ನಮಗೆ ಬೇಗವೇ ಸಿಗುತ್ತಿತ್ತು ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ನಾವು ನಮ್ಮ ಸಂವಿಧಾನ ನೀಡಿರುವ ಹಕ್ಕನ್ನು ಕೇಳಲು ಇಷ್ಟು ಹೋರಾಟ ಮಾಡಬೇಕೆ ಎಂದು ಪ್ರಶ್ನಿಸಿದ ಅವರು, ಈ ವಿಚಾರವನ್ನು ಈ ಮಟ್ಟದಲ್ಲಿ ವಿವಾದ ಮಾಡಬಾರದಿತ್ತು. ಇದೊಂದು ಸಣ್ಣ ವಿಚಾರ. ಇದನ್ನು ನಮ್ಮ ಕಾಲೇಜಿ ನಲ್ಲಿಯೇ ಪರಿಹಾರ ಮಾಡಬಹುದಿತ್ತು. ಆದರೂ ಇವರು ಕೋಮು ವಿವಾದ ವನ್ನಾಗಿ ದೊಡ್ಡ ಮಾಡಿದ್ದಾರೆ ಎಂದು ಖೇಧ ವ್ಯಕ್ತಪಡಿಸಿದರು.
ನಮ್ಮ ಸಂವಿಧಾನಾತ್ಮಕ ಹೋರಾಟವು ಈ ರೀತಿ ಕೋಮು ವಿವಾದ ಆಗುತ್ತದೆ ಎಂದು ನಾವು ಎನಿಸಿಲ್ಲ. ಅವರೆಲ್ಲ ನಮ್ಮ ಗೆಳೆಯರೇ. ನಾವು ಒಂದೇ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದೇವೆ. ಒಟ್ಟಿಗೆ ಸೇರಿ ತಮಾಷೆ ಮಾಡುತ್ತಿದ್ದೇವು. ಈಗ ಅವರೇ ನಮ್ಮ ವಿರುದ್ಧವಾಗಿದ್ದಾರೆಂದು ಎನಿಸಿದರೆ ನೋವು ಆಗುತ್ತದೆ. ನಮ್ಮವರೆ ನಮ್ಮ ವಿರುದ್ಧವಾಗುತ್ತಾರೆ ಎಂದು ನಾವು ಎಂದಿಗೂ ಭಾವಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಆರೋಪಗಳ ವಿರುದ್ಧ ಆಕ್ರೋಶ
ಶಾಸಕ ರಘುಪತಿ ಭಟ್ ಬಿಡುಗಡೆ ಮಾಡಿರುವ ಕಾಲೇಜಿನ ಫೋಟೋದಲ್ಲಿ ನೀವು ಹಿಜಾಬ್ ಹಾಕದೆ ಇರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಆಲಿಯಾ ಅಸದಿ, ಅದರಲ್ಲಿರುವುದು ನಾನಲ್ಲ. ಅವಳು ಆಲಿಯಾ ಬಾನು. ನಾವು ಮೊದಲಿನಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವು. ಆದರೆ ಪ್ರಾಂಶುಪಾಲರು ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಅದು ಆಗ ತೆಗೆದ ಫೋಟೋ. ಅದರ ನಂತರ ನಾವು ನಿರಂತರವಾಗಿ ಹಿಜಾಬ್ ಹಾಕಿ ತರಗತಿ ಬರಲು ಅವಕಾಶ ನೀಡುವಂತೆ ಪ್ರಾಂಶುಪಾಲರಿಗೆ ಮನವಿ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಿಮಗೆ ಈ ರೀತಿ ಹೋರಾಟ ಮಾಡಲು ಅಜ್ಞಾನ ಸ್ಥಳದಲ್ಲಿ ತರಬೇತಿ ಆಗಿದೆ ಎಂಬ ರಘುಪತಿ ಭಟ್ ಹೇಳಿಕೆಗೆ ಉತ್ತರಿಸಿದ ಅವರು, ಸಂವಿಧಾನ ಬದ್ಧ ಹಕ್ಕಿಗೆ ಹೋರಾಟ ಮಾಡಲು ಯಾಕೆ ತರಬೇತಿ ಬೇಕು. ಅದೆಲ್ಲವೂ ಸುಳ್ಳು ಆರೋಪ. ಅಂತಹ ಯಾವುದೇ ತರಬೇತಿ ನಮಗೆ ಅಗತ್ಯವೇ ಇಲ್ಲ ಎಂದು ತಿಳಿಸಿದರು.