ಸುರತ್ಕಲ್: ಟೋಲ್ ಗೇಟ್ ವಿರುದ್ಧದ ಧರಣಿ ಮುಂದುವರಿಕೆ

ಮಂಗಳೂರು, ಫೆ.9: ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿಯಿರುವ ಟೋಲ್ಗೇಟ್ ತೆರವಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ ಸೋಮವಾರದಿಂದ ಆರಂಭಗೊಂಡ ಆಹೋರಾತ್ರಿ ಧರಣಿಯು ಬುಧವಾರವೂ ನಡೆದಿದೆ.
ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಿದ ಈ ಅಕ್ರಮ ಸುಲಿಗೆ ಕೇಂದ್ರವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಹೆಜಮಾಡಿಯಲ್ಲಿ ಟೋಲ್ ಶುಲ್ಕ ನೀಡಿ ಬರುವ ವಾಹನಗಳಿಗೆ ಇಲ್ಲಿ ಉಚಿತ ಪ್ರವೇಶ ನೀಡಬೇಕು ಎಂದು ಪ್ರತಿಭಟನಾಕಾರರು ಬುಧವಾರವೂ ಆಗ್ರಹಿಸಿದರು.
ಬುಧವಾರ ಟೋಲ್‌ಗೇಟ್‌ಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಮಾತುಕತೆಗೆ ಮುಂದಾದರು. ಅಷ್ಟರಲ್ಲಿ ಆಸೀಫ್ ಆಪತ್ಭಾಂಧವ ಜಿಲ್ಲಾಧಿಕಾರಿಯ ಜೊತೆ ಮಾತ್ರ ಈ ಬಗ್ಗೆ ಮಾತನಾಡುವುದಾಗಿ ಹೇಳಿದರಲ್ಲದೆ, ನ್ಯಾಯ ಸಿಗುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಅಶ್ರಫ್, ಯುವ ಸೇನೆ ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರೆ, ಉದ್ಯಮಿ ರಝಕ್ ಹಾಜಿ ಕಲ್ಲಡ್ಕ, ಎಸ್‌ಡಿಪಿಐ ಮುಖಂಡರಾದ ಶಾಕಿರ್ ಅಳಕೆ, ಅಬ್ದುಲ್ ಸಲಾಂ, ಇರ್ಫಾನ್, ಮುಹಮ್ಮದ್ ಅರಾಫತ್, ಫಯಾಝ್ ಸುಲ್ತಾನ್, ಗಡಿನಾಡ ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ, ಝಾಕಿರ್ ಹಾಜಿ, ಮುಹಮ್ಮದ್ ಅಲಂಗರ್ ಮತ್ತಿತರರು ಬೆಂಬಲ ವ್ಯಕ್ತಪಡಿಸಿದರು.