ಯುವ ಜನತೆಯಿಂದ ಜನಪರ ಕಾರ್ಯಕ್ರಮ ಜೀವಂತ: ಸಾಧು ಪಾಣರ

ಉಡುಪಿ, ಫೆ.9: ಯುವಜನತೆ ಜನಪರ ವೌಲ್ಯಗಳನ್ನು ಅರಿತು ಸಮಾಜದಲ್ಲಿ ಮುಂದಿನ ಪೀಳಿಗೆಗಳಿಗೆ ಇಂಥ ಕಾರ್ಯಕ್ರಮಗಳು ಜೀವಂತವಾಗಿರಲು ಶ್ರಮಿಸ ಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಸಾಧು ಪಾಣರ ಹೇಳಿದ್ದಾರೆ.
ಅಲೆವೂರಿನ ಪ್ರಗತಿನಗರದ ಡಾ. ಶಿವರಾಮ ಕಾರಂತ ಕಲಾಗ್ರಾಮದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ವತಿಯಿಂದ ನಡೆದ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗ್ರಾಮೀಣ ಭಾಗದ ಜನರು ಆಚರಿಸಿಕೊಂಡು ಬಂದಿರುವ ಜನಪದ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಕಾಲಕ್ರಮೇಣ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಜನಪರ ಉತ್ಸವ ಕಾರ್ಯಕ್ರಮ ಅನಿವಾರ್ಯವಾಗಿದ್ದು, ಇವುಗಳ ಮೂಲಕ ಜಾನಪದ ಮೌಲ್ಯಗಳ ಉಳಿವಿಗೆ ನಾವೆಲ್ಲ ನೆರವಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕು. ಜಾನಪದ ಪರಂಪರೆಯ ಉಳಿವಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬೇಕು. ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಯುವ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಾನಪದ ಕಲಾವಿದ ರಮೇಶ್ ಕಲ್ಮಾಡಿ, ಜನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಪ್ರದೀಪ್ ಡಿ.ಎಂ. ಹಾವಂಜೆ ನಿರೂಪಿಸಿ, ರಾಮು ವಂದಿಸಿದರು.