ಕೆಪಿಎಸ್ ಶಾಲೆಗಳ ಅಭಿವೃದ್ಧಿ ಸಮಿತಿಗೆ ಪೋಷಕರೇ ಅಧ್ಯಕ್ಷರಾಗಬೇಕು: ಮೊಯ್ದಿನ್ ಕುಟ್ಟಿ
ಮಂಗಳೂರು, ಫೆ.9: ಕೆಪಿಎಸ್ ಶಾಲೆಗಳಲ್ಲಿ ಆ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿಸಿರುವ ತಿದ್ದುಪಡಿ ಆದೇಶ ನಿಯಮ ಬಾಹಿರವಾಗಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕು ಮತ್ತು ಅಭಿವೃದ್ಧಿ ಸಮಿತಿಗೆ ಪೋಷಕರೇ ಅಧ್ಯಕ್ಷರಾಗಬೇಕು ಎಂದು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ ಆಗ್ರಹಿಸಿದ್ದಾರೆ.
ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಪ್ರಾರಂಭಿಸಿರುವ ಕರ್ನಾಟಕ ಪಬ್ಲಿಕ್ ಶಾಲೆ ಗಳಲ್ಲಿ (ಕೆಪಿಎಸ್) ಈ ಹಿಂದೆ ಶಿಕ್ಷಣ ಹಕ್ಕು ಕಾಯಿದೆ ಹಾಗು ನಿಯಮಗಳ ಅನ್ವಯ ಪಾಲಕರಿಂದ ಆಯ್ಕೆಯಾದ ಪೋಷಕ ಪ್ರತಿನಿಧಿಯೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ 2021ರ ಸರಕಾರಿ ಆದೇಶದಲ್ಲಿ ತಿಳಿಸಲಾಗಿತ್ತು.
ಈ ತೀರ್ಮಾನ ನಿಯಮ ಮತ್ತು ಸುತ್ತೋಲೆಗಳ ಅನ್ವಯ ಕ್ರಮಬದ್ಧವಾಗಿತ್ತು. ಅಧ್ಯಕ್ಷರ ಜೊತೆಗೆ ಕ್ಷೇತ್ರದ ಶಾಸಕರು ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿರುವಂತೆ ತಿಳಿಸಲಾಗಿತ್ತು. ಶಾಲೆಗಳ ಅಭಿವೃದ್ಧಿಗೆ 2 ಕೋ.ರೂ. ಹಣ ಮಂಜೂರಾದ ಸುದ್ದಿ ಕೇಳಿದಾಕ್ಷಣ ಶಾಸಕರು ತಮ್ಮ ಅಧಿಕಾರ ದುರಪಯೋಗಪಡಿಸಿಕೊಂಡು ಸರಕಾರದ ಮೇಲೆ ಒತ್ತಡ ಹಾಕಿ, ಕ್ರಮಬದ್ಧವಾದ ಹಿಂದಿನ ತೀರ್ಮಾನವನ್ನು ಅಸಿಂಧುಗೊಳಿಸಿದ್ದಾರೆ. 2022ರ ಜನವರಿ 30ರಂದು ಸರಕಾ ಹೊಸ ಆದೇಶ ಹೊರಡಿಸಿದ್ದು, ಅದರಲ್ಲಿ ಶಾಸಕರೇ ಸಮಿತಿಗಳಿಗೆ ಅಧ್ಯಕ್ಷರಾಗಬೇಕು ಎಂದು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದು ಅತ್ಯಂತ ಖಂಡನೀಯವಾಗಿದೆ. ಕಾನೂನಿನ ಅನ್ವಯ ಪೋಷಕರು ಅಧ್ಯಕ್ಷರಾಗಬೇಕಾದ ಕಡೆ ಕಾನೂನು ಬಾಹಿರವಾಗಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಕೇವಲ ಅಲ್ಲಿರುವ ಅನುದಾನದಲ್ಲಿ ಕೈ ಹಾಕುವ ಉದ್ದೇಶವೇ ಹೊರತು ಬೇರೇನೂ ಅಲ್ಲ. ಶಾಸಕರನ್ನು ಶಾಲೆಯಲ್ಲಿ ಅಧ್ಯಕ್ಷರನ್ನಾಗಿ ಕೂರಿಸುವ ಈ ದಿಢೀರ್ ಆದೇಶ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟು ಪಕ್ಷ ರಾಜಕಾರಣಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ಅಲ್ಲದೆ ಎಸ್‌ಡಿಎಂಸಿ ರಚನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ಮೊಯ್ದಿನ್ ಕುಟ್ಟಿ ಆತಂಕ ವ್ಯಕ್ತ ಪಡಿಸಿದ್ದಾರೆ.
ಈ ಕಾನೂನು ಬಾಹಿರ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆದು ಹಳೆಯ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಎಸ್‌ಡಿಎಂಸಿ ಸಮನ್ವಯ ವೇದಿಕೆ ಆಗ್ರಹಿಸಿದೆ.







