ಚಿಕ್ಕಮಗಳೂರು: ಕಾಳುಮೆಣಸು ಕಟಾವು ವೇಳೆ ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿ ರೈತ ಗಂಭೀರ
ಚಿಕ್ಕಮಗಳೂರು, ಫೆ.9: ಕಬ್ಬಿಣದ ಏಣಿಯಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದ ಸಂದರ್ಭ ಏಣಿಯು ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶಗೊಂಡು ಪ್ರಜ್ಞಾಹೀನರಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ.
ಕಿರುಗುಂದ ಗ್ರಾಮದ ಸುಬ್ರಾಯ ಆಚಾರ್ ಎಂಬವರ ಪುತ್ರ ಧರ್ಮ(36) ವಿದ್ಯುತ್ ಸ್ಪರ್ಶದಿಂದ ಪ್ರಜ್ಞಾಹೀನರಾಗಿರುವ ವ್ಯಕ್ತಿಯಾಗಿದ್ದು, ಬುಧವಾರ ಬೆಳಗ್ಗೆ ತಮ್ಮದೇ ಜಮೀನಿನಲ್ಲಿ ಕಬ್ಬಿಣದ ಏಣಿ ಮೂಲಕ ಕಾಳುಮೆಣಸು ಕಟಾವು ಮಾಡಲು ಮುಂದಾಗಿದ್ದು, ಕಟಾವು ಮಾಡುತ್ತಿದ್ದ ವೇಳೆ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ಏಣಿ ತಾಗಿದೆ. ಈ ವೇಳೆ ವಿದ್ಯುತ್ ಹರಿದು ಧರ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಪ್ರಜ್ಞಾಹೀನರಾಗಿದ್ದಾರೆಂದು ತಿಳಿದು ಬಂದಿದೆ.
ಕುಟುಂಬಸ್ಥರು, ಗ್ರಾಮಸ್ಥರು ಕೂಡಲೇ ಗಾಯಾಳುವನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಮೆಸ್ಕಾಂ ನಿರ್ಲಕ್ಷ್ಯ ಆರೋಪ: ಮಲೆನಾಡು ಭಾಗದಲ್ಲಿ ಕಾಳುಮೆಣಸು ಕಟಾವು ಸಂದರ್ಭದಲ್ಲಿ ಕಬ್ಬಿಣ ಹಾಗೂ ಅಲ್ಯೂಮಿನಿಯಂ ಏಣಿಗಳನ್ನು ಬಳಸಿ ಕಟಾವು ಮಾಡುವುದು ವಾಡಿಕೆಯಾಗಿದ್ದು, ಈ ವೇಳೆ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಏಣಿಗಳು ತಾಗಿ ಪ್ರತಿವರ್ಷ ರೈತರು, ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಯೂಮಿನಿಯಂ, ಕಬ್ಬಿಣದ ಏಣಿಗಳ ಬಳಕೆಗೆ ಮಲೆನಾಡಿನಲ್ಲಿ ನಿಷೇದ ಹೇರಬೇಕು, ಇಲ್ಲವೇ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಬೇರೆ ಮಾರ್ಗದಲ್ಲಿ ಅಳವಡಿಸಬೇಕು, ಇಲ್ಲವೇ ಜಮೀನು ವ್ಯಾಪ್ತಿಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‍ಗಳ ವಿದ್ಯುತ್ ತಂತಿಗಳಿಗೆ ಪೈಪ್‍ಗಳನ್ನು ಅಳವಡಿಸಲು ಮೆಸ್ಕಾಂ ಇಲಾಖೆ ಕ್ರಮವಹಿಸಬೇಕೆಂದು ಸಾರ್ವಜನಿಕರು, ರೈತರು ಈ ಹಿಂದೆಯೇ ಆಗ್ರಹಿಸಿದ್ದಾರೆ. ಆದರೆ ಈ ಸಂಬಂಧ ಇಲಾಖೆ ಯಾವುದೇ ಕ್ರಮವಹಿಸದ ಪರಿಣಾಮ ಇಂತಹ ಘಟನೆಗಳನ್ನು ಪ್ರತಿ ವರ್ಷ ಮರುಕಳಿಸುತ್ತಲೇ ಇದೆ ಎಂದು ಆರೋಪಿಸಲಾಗುತ್ತಿದೆ.
ಪರಿಹಾರಕ್ಕೆ ಆಗ್ರಹ: ವಿದ್ಯುತ್ ಸ್ಪರ್ಶದಿಂದ ಗಂಭೀರ ಸ್ಥಿತಿಯಲ್ಲಿರುವ ಧರ್ಮ ಅವರ ತೋಟದಲ್ಲಿ ವಿದ್ಯುತ್ ಕಂಬಗಳನ್ನು ಅತ್ಯಂತ ಕೆಳಭಾಗದಲ್ಲಿ ಹಾಕಲಾಗಿದೆ. ಇದರಿಂದ ವಿದ್ಯುತ್ ತಂತಿಗಳು ಕೈಗೆ ಸಿಗುವಂತೆ ನೇತಾಡುತ್ತಿದೆ. ಕಂಬಗಳನ್ನು ಬದಲಾಯಿಸಲು ಹಾಗೂ ಬೇರೆಡೆ ಹಾಕಲು ಮೆಸ್ಕಾಂ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಮೆಸ್ಕಾಂ ಅಧಿಕಾರಿಗಳು ಇದನ್ನು ನಿರ್ಲಕ್ಷ್ಯಿಸಿದ್ದರಿಂದ ಅವಘಡ ಸಂಭವಿಸಿದೆ. ಈ ಘಟನೆಗೆ ಮೆಸ್ಕಾಂ ಇಲಾಖೆಯೇ ಕಾರಣ. ಇಲಾಖೆ ವತಿಯಿಂದ ಈ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕಿರುಗುಂದ ಗ್ರಾಮದ ನಿವಾಸಿಗಳಾದ ರವಿಕುಮಾರ್, ಕಿರುಗುಂದ ನಜೀರ್ ಆಗ್ರಹಿಸಿದ್ದಾರೆ.







