ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ ಲಸಿಕೆ ಉತ್ಪಾದನೆ ತಾತ್ಕಾಲಿಕ ಸ್ಥಗಿತ: ವರದಿ

ನ್ಯೂಯಾರ್ಕ್, ಫೆ.9: ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯು ಹಾಲಂಡಿನ ಲೀಡೆನ್ ನಗರದಲ್ಲಿನ ತನ್ನ ಘಟಕದಲ್ಲಿ ಕೋವಿಡ್ -19 ಲಸಿಕೆಯ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಘಟಕದಲ್ಲಿ ಈಗ ಪ್ರಾಯೋಗಿಕ ಲಸಿಕೆಯನ್ನು ಅಭಿವೃದ್ಧಿಗೊಳಿಸುತ್ತಿರುವುದರಿಂದ ಕಳೆದ ಡಿಸೆಂಬರ್ನಿಂದ ಕೋವಿಡ್ ಲಸಿಕೆಯ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲ ತಿಂಗಳಲ್ಲೇ ಕೋವಿಡ್ ಲಸಿಕೆಯ ಉತ್ಪಾದನೆ ಮರು ಆರಂಭಿಸುವ ನಿರೀಕ್ಷೆಯಿದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಹೇಳಿದೆ.
ಈಗ ಸಂಸ್ಥೆಯ ಬಳಿ ಮಿಲಿಯಾಂತರ ಡೋಸ್ ಕೋವಿಡ್ ಲಸಿಕೆ ದಾಸ್ತಾನಿದೆ. ಕೊವ್ಯಾಕ್ಸ್ ವ್ಯವಸ್ಥೆ(ಜಾಗತಿಕ ಮಟ್ಟದಲ್ಲಿ ಕೋವಿಡ್ ಲಸಿಕೆಯ ಸಮಾನ ಹಂಚಿಕೆಗಾಗಿ ರೂಪುಗೊಂಡ ಸಂಸ್ಥೆ) ಹಾಗೂ ಆಫ್ರಿಕನ್ ಒಕ್ಕೂಟಕ್ಕೆ ನಮ್ಮ ಲಸಿಕೆ ಪೂರೈಕೆಯ ಒಪ್ಪಂದದ ಜವಾಬ್ದಾರಿಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. 2022ರಲ್ಲಿ 3 ಬಿಲಿಯನ್ ಡಾಲರ್ನಿಂದ 3.5 ಮಿಲಿಯನ್ ಡಾಲರ್ ಮೊತ್ತದ ಕೋವಿಡ್ ಲಸಿಕೆ ಮಾರಾಟ ಮಾಡುವ ಗುರಿಯನ್ನು ಜಾನ್ಸನ್ ಸಂಸ್ಥೆ ಹೊಂದಿದೆ. ಇದೇ ಅವಧಿಯಲ್ಲಿ ಪೈಝರ್ ಸಂಸ್ಥೆ 32 ಬಿಲಿಯನ್ ಡಾಲರ್ ಮೊತ್ತದ ಲಸಿಕೆ ಮಾರಾಟದ ಗುರಿ ಇರಿಸಿಕೊಂಡಿದೆ.
ಜಾನ್ಸನ್ ಲಸಿಕೆಯನ್ನು ಅತ್ಯಂತ ತಂಪಾದ ತಾಪಮಾನದಲ್ಲಿ ಇಡುವ ಅಗತ್ಯವಿಲ್ಲ. ಅಲ್ಲದೆ ಕೋವಿಡ್ ವಿರುದ್ಧದ ಪ್ರತಿರೋಧ ಶಕ್ತಿಗೆ ಈ ಲಸಿಕೆಯ ಒಂದೇ ಡೋಸ್ ಸಾಕಾಗುತ್ತದೆ ಎಂದು ಹೇಳಲಾಗಿರುವುದರಿಂದ ಅಭಿವೃದ್ಧಿಶೀಲ ದೇಶಗಳಲ್ಲಿ ಜಾನ್ಸನ್ ಲಸಿಕೆಗೆ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆಗೆ ಇನ್ನಷ್ಟು ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ಹೇಳಿದೆ.







