ಲಿಬಿಯಾ: ನೂತನ ಪ್ರಧಾನಿ ಆಯ್ಕೆಗೆ ಇಂದು ಸಂಸತ್ತಿನ ಅಧಿವೇಶನ

ಟ್ರಿಪೋಲಿ, ಫೆ.9: ಮಧ್ಯಂತರ ಸರಕಾರದ ನೇತೃತ್ವ ವಹಿಸುವ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಲಿಬಿಯಾದ ಸಂಸತ್ತಿನ ಅಧಿವೇಶನ ಗುರುವಾರ ನಡೆಯಲಿದೆ ಎಂದು ಮೂಲಗಳು ಹೇಳಿದೆ.
ಹಾಲಿ ಮಧ್ಯಂತರ ಪ್ರಧಾನಿ ಅಬ್ದುಲ್ ಹಮೀದ್ ಡಿಬೆಬಾರನ್ನು ಬದಲಿಸುವ ನಿಟ್ಟಿನಲ್ಲಿ ಈ ಅಧಿವೇಶನ ನಡೆಯಲಿದೆ. ಆದರೆ ಪದತ್ಯಾಗ ಮಾಡಲು ಅಬ್ದುಲ್ ಹಮೀದ್ ನಿರಾಕರಿಸಿರುವುದು ದೇಶದಲ್ಲಿ ಮತ್ತೊಂದು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಮುನ್ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಹಮೀದ್ರನ್ನು ಪ್ರಧಾನಿಯಾಗಿ ನೇಮಿಸಿದ ಸಂದರ್ಭ ಅಧ್ಯಕ್ಷ ಹುದ್ದೆಯ ಚುನಾವಣೆ ಡಿಸೆಂಬರ್ 24ರಂದು ನಡೆಯುವುದೆಂದು ನಿಗದಿಯಾಗಿತ್ತು. ಆದರೆ ನಿಗದಿತ ದಿನದಂದು ಚುನಾವಣೆ ನಡೆಸಲು ಹಮೀದ್ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ಡಿಸೆಂಬರ್ 24ರಿಂದ ಹಮೀದ್ ಸರಕಾರದ ಕಾರ್ಯಾವಧಿ ಅಂತ್ಯವಾಗಿದೆ ಎಂಬುದು ಸಂಸದರ ವಾದವಾಗಿದೆ.
ಆದರೆ ಇದಕ್ಕೆ ಒಪ್ಪದ ಹಮೀದ್ ಪದತ್ಯಾಗ ಮಾಡಲು ನಿರಾಕರಿಸಿರುವುದು ಲಿಬಿಯಾದಲ್ಲಿ ರಾಜಕೀಯ ಸ್ಥಿರತೆ ಮೂಡಿಸುವ ಅಂತರಾಷ್ಟ್ರೀಯ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ . ಚುನಾವಣೆಯನ್ನು ನಿಯಂತ್ರಿಸುವ ಕಾನೂನಿನ ವಿಷಯದಲ್ಲಿ ಪ್ರತಿಸ್ಪರ್ಧಿ ಬಣಗಳ ನಡುವಿನ ವಿವಾದದ ಕಾರಣ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಲಾಗಿತ್ತು. ಗುರುವಾರ ನಡೆಯಲಿರುವ ಅಧಿವೇಶನದಲ್ಲಿ ಮಾಜಿ ಸಚಿವರಾದ ಫಾತಿ ಬಷಗ ಅಥವಾ ಖಾಲಿದ್ ಅಲ್ ಬೈಬಾಸ್ ಮಧ್ಯಂತರ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.







