ಮಡಿಕೇರಿ: ಜೋಡಿ ಕೊಲೆ ಪ್ರಕರಣ; ಜಾಮೀನು ರದ್ದು, ಆರೋಪಿ ಬಂಧನ

ಆರೋಪಿ ದಿಲೀಪ್ ಕುಮಾರ್
ಮಡಿಕೇರಿ ಫೆ.9 : ಜೋಡಿ ಕೊಲೆ ಆರೋಪಿಗೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನೀಡಿದ್ದ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಆರೋಪಿಯನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಮಳ್ತೆ ಗ್ರಾಮದ ದಿ. ಪೊನ್ನಪ್ಪ ಅವರ ಪುತ್ರ ಡಿ.ಪಿ.ದಿಲೀಪ್ಕುಮಾರ್ ಎಂಬವರು, ತಾಯಿ ಮಗಳನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಆದರೆ ಆರೋಪಿಗೆ ಶೀಘ್ರ ಜಾಮೀನು ನೀಡಿದ ಆದೇಶದ ವಿರುದ್ಧ ಸರ್ಕಾರ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಪಿಟಿಶನ್ ಹಾಕಿತ್ತು. ಜ.27ರಂದು ಉಚ್ಚನ್ಯಾಯಾಲಯ ಜಾಮೀನು ರದ್ದುಗೊಳಿಸಿ ಆದೇಶ ನೀಡಿದೆ.
2019 ಏ.30ರಂದು ದೊಡ್ಡಮಳ್ತೆ ಗ್ರಾಮದ ದಿ.ಎಂ.ಬಿ.ವೀರರಾಜು ಎಂಬವರ ಪತ್ನಿ ಕವಿತ, ಮಗಳು ಜಗಶ್ರೀ ಅವರನ್ನು ಕಾಫಿ ತೋಟದಲ್ಲಿ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಮೆ.2ರಂದು ಆರೋಪಿ ದಿಲೀಪ್ ಕುಮಾರ್ ನನ್ನು ಪೊಲೀಸರು ಬಂಧಿಸಿ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಜೂ.24 ರಂದು ಆರೋಪಿಗೆ ಮಡಿಕೇರಿ ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು.
ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.







