ಪೆರು: 6 ತಿಂಗಳಲ್ಲಿ 4ನೇ ಸಚಿವ ಸಂಪುಟ ಪ್ರಮಾಣ ವಚನ

ಲಿಮಾ, ಫೆ.9: ಪೆರು ದೇಶದ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲೊ ಮಂಗಳವಾರ ಹೊಸ ಸಂಪುಟವನ್ನು ರಚಿಸಿದ್ದು, 6 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಬಳಿಕದ 4ನೇ ಸಚಿವ ಸಂಪುಟ ಇದಾಗಿದೆ.
3 ದಿನದ ಹಿಂದಷ್ಟೇ ನೇಮಕವಾಗಿದ್ದ ಪ್ರಧಾನಿಯನ್ನೂ ಬದಲಿಸಿ ಹೊಸ ಪ್ರಧಾನಿಯನ್ನು ನೇಮಕ ಮಾಡಲಾಗಿದೆ. ನ್ಯಾಯ ಇಲಾಖೆಯ ಸಚಿವರಾಗಿದ್ದ 79 ವರ್ಷದ ಅನಿಬಲ್ ಟೊರೆಸ್ ನೂತನ ಪ್ರಧಾನಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ ಒಮೈಕ್ರಾನ್ ರೂಪಾಂತರಿ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಪದವೀಧರ ಹರ್ನಾನ್ ಕೊಂಡೋರಿಯನ್ನು ಆರೋಗ್ಯ ಸಚಿವರನ್ನಾಗಿ, ಪರಮಾಣು ಭೌತಶಾಸ್ತ್ರಜ್ಞ ಮೊಡೆಸ್ಟೊ ಮೊಂಟೊಯಾರನ್ನು ಪರಿಸರ ಸಚಿವರನ್ನಾಗಿ ನೇಮಿಸಲಾಗಿದೆ.
ಈ ಹಿಂದಿನ ಪ್ರಧಾನಿ ಮಿರ್ಥಾ ವಾಸ್ಕೆರ್ ಅವರು ಪೊಲೀಸ್ ಪಡೆಯಲ್ಲಿ ಭಡ್ತಿ ಪ್ರಕ್ರಿಯೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯದಿಂದಾಗಿ ಹಠಾತ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನದಲ್ಲಿ ಸಂಸದ ಹೆಕ್ಟರ್ ವಾಲೆರ್ ಪಿಂಟೊರನ್ನು ಪ್ರಧಾನಿಯನ್ನಾಗಿ ನೇಮಿಸಲಾಗಿತ್ತು. ಆದರೆ 2016ರಲ್ಲಿ ಕೌಟುಂಬಿಕ ಹಿಂಸಾಚಾರದ ಕಾರಣ ಪಿಂಟೊರನ್ನು ಪತ್ನಿ ಮತ್ತು ಪುತ್ರಿ ತೊರೆದಿದ್ದಾರೆ ಎಂಬ ವರದಿಯ ಹಿನ್ನೆಲೆಯಲಿ್ಲ ಅವರೂ ಪದತ್ಯಾಗ ಮಾಡಿದ್ದರು.
ಪೆರುವಿನ ಆಡಳಿತಾರೂಢ ಮಾರ್ಕ್ಸಿಸ್ಟ್ ಫ್ರೀ ಪೆರು ಪಾರ್ಟಿಯ ಅಭ್ಯರ್ಥಿಯಾಗಿ ಜುಲೈಯಲ್ಲಿ ಅಧ್ಯಕ್ಷ ಹುದ್ದೆಗೇರಿದ್ದ ಕ್ಯಾಸ್ಟಿಲೊ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಜತೆಗೆ ವಿಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದು ಅವರ ವಿರುದ್ಧ ದೋಷಾರೋಪಣೆಯ ವಿಫಲ ಪ್ರಯತ್ನವನ್ನೂ ವಿಪಕ್ಷಗಳು ನಡೆಸಿವೆ. ಹೆಚ್ಚು ಕೇಂದ್ರೀಕೃತ ಆರ್ಥಿಕ ನೀತಿಗಳಿಗಾಗಿ ಸ್ವಪಕ್ಷದಿಂದಲೇ ಖಂಡನೆಗೆ ಒಳಗಾಗಿದ್ದರು.







