ಹೊಸ ಪರಮಾಣು ಒಪ್ಪಂದ ರೂಪುಗೊಳ್ಳುವ ಸಾಧ್ಯತೆಯಿದೆ: ಅಮೆರಿಕ

ವಾಷಿಂಗ್ಟನ್, ಫೆ.9: ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪುನರುಜ್ಜೀವಿತಗೊಳಿಸಿದ ಒಪ್ಪಂದವೊಂದು ರೂಪುಗೊಳ್ಳುವ ಲಕ್ಷಣ ಗೋಚರಿಸುತ್ತಿದೆ ಎಂದು ಅಮೆರಿಕ ಬುಧವಾರ ಹೇಳಿದೆ.
ಆದರೆ, ಯಾವುದೇ ಒಪ್ಪಂದಕ್ಕೆ ಅನುಮೋದನೆ ದೊರಕುವ ಮುನ್ನ ಅದನ್ನು ಅಮೆರಿಕದ ಸಂಸತ್ತು ಪರಿಶೀಲಿಸಿ ಅದರ ಅಂಶಗಳ ಕುರಿತು ಮತ ಚಲಾಯಿಸಬೇಕು ಎಂದು 33 ಸೆನೆಟರ್ಗಳ ಪ್ರಬಲ ತಂಡ ಅಧ್ಯಕ್ಷ ಬೈಡೆನ್‌ಗೆ ಎಚ್ಚರಿಕೆ ನೀಡಿದೆ.
ಆಸ್ಟ್ರಿಯಾದ ವಿಯೆನ್ನಾದಲ್ಲಿ ಇರಾನ್, ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ ಹಾಗೂ ರಶ್ಯಾದ ಪ್ರತಿನಿಧಿಗಳು ಸುಮಾರು 1 ತಿಂಗಳ ಬಿಡುವಿನ ಬಳಿಕ ಮತ್ತೆ ಪರಮಾಣು ಒಪ್ಪಂದದ ವಿಷಯದಲ್ಲಿ ಸಭೆ ಸೇರಿವೆ. ಈ ಸಭೆಯಲ್ಲಿ ಅಮೆರಿಕ ಪರೋಕ್ಷವಾಗಿ ಪಾಲ್ಗೊಂಡಿದೆ. 2015ರಲ್ಲಿ ಸಹಿ ಹಾಕಲಾದ ಜಂಟಿ ಸಮಗ್ರ ಕ್ರಿಯಾಯೋಜನೆ(ಜೆಸಿಪಿಒಎ)ಯ ಮರುಸ್ಥಾಪನೆ ಈ ಸಭೆಯ ಪ್ರಮುಖ ಉದ್ದೇಶವಾಗಿದೆ. 2018ರಲ್ಲಿ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಹಿನ್ನೆಲೆಯಲ್ಲಿ ಜೆಸಿಪಿಒಎ ಮುರಿದುಬಿದ್ದಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಿದರೆ ಆ ದೇಶದ ಮೇಲಿನ ಆರ್ಥಿಕ ನಿರ್ಬಂಧ ತೆರವುಗೊಳಿಸುವುದು ಜೆಸಿಪಿಒಎಯ ಪ್ರಮುಖ ಅಂಶವಾಗಿದೆ.
ಎಲ್ಲಾ ಪಕ್ಷದವರ ಪ್ರಮುಖ ಆತಂಕದ ಬಗ್ಗೆ ಗಮನ ಹರಿಸುವ ಒಪ್ಪಂದ ರೂಪುಗೊಳ್ಳುವ ಸಾಧ್ಯತೆಯಿದೆ. ಮುಂಬರುವ ವಾರಗಳಲ್ಲಿ ಈ ಒಪ್ಪಂದಕ್ಕೆ ಬರಲಾಗದಿದ್ದರೆ, ಮತ್ತೆ ಜೆಸಿಪಿಒಎಗೆ ಮರಳುವುದಕ್ಕೆ ಇರಾನ್ ಈಗ ನಡೆಸುತ್ತಿರುವ ಪರಮಾಣು ಕಾರ್ಯಕ್ರಮಗಳು ತಡೆಯಾಗಲಿವೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.
ನಾವು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಒಪ್ಪಂದ ಸಾಧ್ಯವಾದೀತೇ ಎಂಬುದು ಅಮೆರಿಕ ನೀಡುವ ಪ್ರತಿಕ್ರಿಯೆಯನ್ನು ಆಧರಿಸಿದೆ ಎಂದು ಇರಾನ್ನ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಸಯೀದ್ ಖತೀಬ್ಜಾದೆ ಹೇಳಿದ್ದಾರೆ. ಕೆಲವು ವಿಷಯಗಳ ಬಗ್ಗೆ ಸ್ಪಷ್ಟನೆಯ ಅಗತ್ಯವಿದೆ. ನಿರ್ಬಂಧ ಸಡಿಲಿಕೆಯ ವ್ಯಾಪ್ತಿ, ಇರಾನ್ ಸ್ಥಾಪಿಸಿರುವ ಪರಮಾಣು ಸ್ಥಾವರಗಳನ್ನು ಏನು ಮಾಡುವುದು ಮುಂತಾದ ಕೆಲವು ಅಂಶಗಳ ಬಗ್ಗೆ ಸಭೆಯಲ್ಲಿ ಸ್ಪಷ್ಟತೆ ದೊರಕಬೇಕಿದೆ. ಇವು ವಿವಾದಾತ್ಮಕವಾಗಿದ್ದು ಇದುವರೆಗೆ ಎರಡೂ ಕಡೆಯವರು ಒಪ್ಪಲು ಸಿದ್ಧವಿಲ್ಲದ ರಿಯಾಯತಿಗಳ ಅಗತ್ಯವಿದೆ ಎಂದು ಅಮೆರಿಕದ ಪರಮಾಣು ಬೆದರಿಕೆ ಉಪಕ್ರಮಗಳ ನಿಗಾ ಸಮಿತಿಯ ಎರಿಕ್ ಬ್ರಿವರ್ ಹೇಳಿದ್ದಾರೆ.
ಸಂಧಾನಕಾರರ ತಂಡ ಮುಕ್ತಾಯದ ಗೆರೆಗಿಂತ 5 ನಿಮಿಷ ದೂರದಲ್ಲಿದೆ. ಅಂತಿಮ ಒಪ್ಪಂದದ ಕರಡುಪ್ರತಿ ತಯಾರಾಗಿದೆ. ಕೆಲವು ಅಂಶಗಳ ಬಗ್ಗೆ ಇನ್ನಷ್ಟು ಕಾರ್ಯದ ಅಗತ್ಯವಿದೆ ಎಂದು ರಶ್ಯಾದ ಪ್ರತಿನಿಧಿ ಮಿಖಾಯಿಲ್ ಉಲ್ಯಾನೊವ್ ಹೇಳಿದ್ದಾರೆ. ಮಾತುಕತೆ ನಿರ್ಣಾಯಕ ಹಂತದಲ್ಲಿದೆ ಎಂದು ಜರ್ಮನ್ ಛಾನ್ಸಲರ್ ಒಲಾಫ್ ಶೋಲ್ಝ್ ಹೇಳಿದ್ದಾರೆ.







