ಹಿಜಾಬ್ ವಿವಾದ: ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮಹಾರಾಷ್ಟ್ರ ಸಚಿವ

ಮುಂಬೈ: ನೆರೆಯ ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ನಡುವೆ ಮಹಾರಾಷ್ಟ್ರ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್, ದೇಶದಲ್ಲಿ ಓರ್ವ ಏನನ್ನು ತಿನ್ನಬೇಕು ಹಾಗೂ ಏನನ್ನು ಧರಿಸಬೇಕು ಎಂದು ಸಂಘ ಪರಿವಾರ ಹಾಗೂ ಬಿಜೆಪಿ ನಿರ್ಧರಿಸುತ್ತಿದೆಯೇ ಎಂದು ಬುಧವಾರ ಪ್ರಶ್ನಿಸಿದ್ದಾರೆ. ಅಲ್ಲದೆ, ಇದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ.
‘‘ದೇಶದಲ್ಲಿ ಏನನ್ನು ತಿನ್ನಬೇಕು ಹಾಗೂ ಏನನ್ನು ಧರಿಸಬೇಕು ಎಂದು ಬಿಜೆಪಿ ಹಾಗೂ ಸಂಘ ಪರಿವಾರ ನಿರ್ಧರಿಸುತ್ತಿದೆಯೇ? ಇದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ. ಮುಸ್ಲಿಂ ಬಾಲಕಿಯರು ಶಿಕ್ಷಣ ಪಡೆಯಲು ಶಾಲೆ ಹಾಗೂ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಇದು ಸಮಸ್ಯೆಯೇ? ಭೇಟಿ ಪಡಾವೊ ಘೋಷಣೆ ಏನಾಯಿತು’’ ಎಂದು ಮಲ್ಲಿಕ್ ಅವರು ಟ್ವಿಟ್ಟರ್‌ನಲ್ಲಿ ಹಿಂದಿಯಲ್ಲಿ ಪ್ರಶ್ನಿಸಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಅವರು, ಶಿಕ್ಷಣ ಸಂಸ್ಥೆಗಳು ಸಹಿಷ್ಣುತೆ, ಸಮಾನತೆ, ಏಕತೆಯನ್ನು ಕಲಿಸುವ ಕೇಂದ್ರವಾಗಬೇಕು ಎಂದಿದ್ದಾರೆ. ಮುಸ್ಲಿಂ ಮಹಿಳೆಯೋರ್ವರು ತನ್ನ ಹಕ್ಕುಗಳಿಗಾಗಿ ಘೋಷಣೆ ಕೂಗುವ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಪ್ರಭಾವಶಾಲಿ ಎಂದು ಭಾವಿಸಲಾಗಿದೆ. ಯಾಕೆಂದರೆ ಶಿಕ್ಷಣದ ಹಕ್ಕಿಗಾಗಿ ಹಾಗೂ ಬಟ್ಟೆಯ ಆಯ್ಕೆಗಾಗಿ ಸಶಕ್ತೀಕರಣಗೊಂಡ ಮಹಿಳೆ ಹೋರಾಟ ನಡೆಸುತ್ತಿರುವುದನ್ನು ಚಿತ್ರಿಸುತ್ತದೆ ಎಂದು ಅವರು ಹೇಳಿದ್ದಾರೆ.
‘‘ಬಿಜೆಪಿ ತನ್ನ ಆಯ್ಕೆಯನ್ನು ಹೇರಲು ಪ್ರಯತ್ನಿಸುತ್ತಿದೆ. ಉತ್ತರದಲ್ಲಿ ಪರ್ದಾವನ್ನು ಬಳಸುತ್ತಾರೆ. ಅದನ್ನು ತೆಗೆಯಲು ಸಾಧ್ಯವೇ? ಇದು ಬಹುಸಂಖ್ಯಾತರ ರಾಜಕೀಯ’’ ಎಂದು ನವಾಬ್ ಮಲ್ಲಿಕ್ ಹೇಳಿದರು.







