ಹಿಜಾಬ್ ಪ್ರಕರಣ: ಕರ್ನಾಟಕ ಹೈಕೋರ್ಟ್ ನಿಂದ ಅರ್ಜಿಗಳನ್ನು ವರ್ಗಾಯಿಸಬೇಕೆಂಬ ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಪೆ.10: ಹಿಜಾಬ್ ವಿವಾದ ಕುರಿತು ಅರ್ಜಿಗಳನ್ನು ತನಗೆ ವರ್ಗಾಯಿಸಿಕೊಳ್ಳಲು ಗುರುವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ಕರ್ನಾಟಕ ಸರಕಾರವು ಮೊದಲು ಅವುಗಳ ವಿಚಾರಣೆ ನಡೆಸಿ ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿತು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಅರ್ಜಿಗಳ ವರ್ಗಾವಣೆಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದಾಗ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು,ದಯವಿಟ್ಟು ಕಾಯಿರಿ,ಉಚ್ಚ ನ್ಯಾಯಾಲಯವು ಅವುಗಳ ವಿಚಾರಣೆ ನಡೆಸಲಿ. ನಾವು ಈಗಲೇ ಮಧ್ಯಪ್ರವೇಶಿಸುವುದು ಸರಿಯಲ್ಲ. ಒಂದೆರಡು ದಿನಗಳವರೆಗೆ ಕಾಯಿರಿ ’ಎಂದು ಹೇಳಿದರು.
2018ರ ಶಬರಿಮಲೆ ತೀರ್ಪಿನಿಂದ ಹುಟ್ಟಿಕೊಂಡಿರುವ ಕಾನೂನು ಪ್ರಶ್ನೆಗಳನ್ನು ಪರಿಶೀಲಿಸುತ್ತಿರುವ ಒಂಭತ್ತು ನ್ಯಾಯಾಧೀಶರ ಪೀಠಕ್ಕೆ ಹಿಜಾಬ್ ವಿಷಯವನ್ನು ವರ್ಗಾಯಿಸಬೇಕು ಎಂದು ಸಿಬಲ್ ಕೋರಿಕೊಂಡರಾದರೂ,ಕರ್ನಾಟಕ ಉಚ್ಚ ನ್ಯಾಯಾಲಯದ ಮೂವರು ಸದಸ್ಯರ ವಿಸ್ತೃತ ಪೀಠವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ ಎಂದು ಬೆಟ್ಟು ಮಾಡಿದ ಮು.ನ್ಯಾ.ರಮಣ ಅವರು,ಅದಕ್ಕೆ ಸಮಯಾವಕಾಶವನ್ನು ನೀಡಬೇಕು ಎಂದರು.
ವಿದ್ಯಾರ್ಥಿಯೋರ್ವ ಸಲ್ಲಿಸಿರುವ ವರ್ಗಾವಣೆ ಅರ್ಜಿಯನ್ನು ಹಾಗೇ ಪಟ್ಟಿ ಮಾಡುವಂತೆ ಮತ್ತು ಯಾವುದೇ ಆದೇಶವನ್ನು ಹೊರಡಿಸಬೇಕಿಲ್ಲ ಎಂದು ಸಿಬಲ್ ಆಗ್ರಹಿಸಿದಾಗ,‘ನಾವು ವಿಷಯವನ್ನು ಪಟ್ಟಿ ಮಾಡಿದರೆ ಹೈಕೋರ್ಟ್ ಎಂದಿಗೂ ವಿಚಾರಣೆ ನಡೆಸುವುದಿಲ್ಲ ಎನ್ನುವುದು ಸಮಸ್ಯೆ’ ಎಂದು ಮು.ನ್ಯಾ.ರಮಣ ತಿಳಿಸಿದರು.
ಕರ್ನಾಟಕದಲ್ಲಿ ಶಾಲಾಕಾಲೇಜುಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿನಿಯರಿಗೆ ಕಲ್ಲುಗಳನ್ನು ಎಸೆಯಲಾಗುತ್ತಿದೆ. ಸಮಸ್ಯೆ ದೇಶಾದ್ಯಂತ ಹರಡುತ್ತಿದೆ ಎಂದೂ ಸಿಬಲ್ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.







